ಬುಲಂದ್ ಶಹರ್, ಅ.26 (DaijiworldNews/PY): ನನ್ನ ಬೆಂಗಾವಲು ಪಡೆಯ ಮೇಲೆ ಯುಪಿಯ ಬುಲಂದ್ ಶಹರ್ನಲ್ಲಿ ಗುಂಡಿನ ದಾಳಿ ನಡೆಲಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಇನ್ನೂ ಕೂಡಾ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಆಜಾದ್ ಸಮಾಜ್ ಪಕ್ಷದ ಮುಖಂಡ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಈ ಘಟನೆಯು ವಿಧಾನಸಭೆ ಉಪಚುನಾವಣೆಗಾಗಿ ನಡೆಸುತ್ತಿದ್ದ ರ್ಯಾಲಿಯ ಸಂದರ್ಭ ನಡೆದಿದೆ ಎಂದು ತಿಳಿಸಿದ್ದಾರೆ.
ಆಜಾದ್ ಸಮಾಜ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ವಿರೋಧ ಪಕ್ಷಗಳಿಗೆ ಭೀತಿ ಉಂಟಾಗಿದೆ ಎಂದಿದ್ದಾರೆ.
ನನ್ನ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದವರು ಹೇಡಿಗಳು. ಶಾಂತಿಯುತವಾದ ವಾತಾವರಣವನ್ನು ಧ್ವಂಸ ಮಾಡಲು ಈ ಯೋಜನೆ ರೂಪಿಸಿದ್ದಾರೆ. ಈ ದಾಳಿಯಿಂದಾಗಿ ರ್ಯಾಲಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ಅವರು, ನಮಗೆ ಈ ಘಟನೆಯ ಬಗ್ಗೆ ಸ್ಪಷ್ಟನೆ ದೊರಕಿಲ್ಲ. ಸುದ್ದಿ ಸಂಸ್ಥೆಯೊಂದ ಗುಂಡಿನ ದಾಳಿ ನಡೆದಿದ್ದರ ಬಗ್ಗೆ ಆರೋಪಿಸಿದೆ ಎಂದಿದ್ದಾರೆ.