ಶಿವಮೊಗ್ಗ, ಅ.26 (DaijiworldNews/PY): ಸೊರಬ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ 87ನೇ ಜನ್ಮಸ್ಮರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್ಲೈನ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಂಗಾರಪ್ಪ ಅವರು ಶಿಕ್ಷಣ ಸೇರಿದಂತೆ ಆರೋಗ್ಯ, ಕೃಷಿಕ್ಷೇತ್ರದಲ್ಲಿ ತಂದದೂರದೃಷ್ಟಿ ಯೋಜನೆಯ ಸಲುವಾಗಿ ಅವರು ಜನಮಾನಸದಲ್ಲಿ ಇಂದು ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಬಂಗಾರಪ್ಪ ಅವರದ್ದು ನೇರ ನುಡಿ. ಅಲ್ಲದೇ ಅವರು ಸಮಾಜಮುಖಿ ಚಿಂತನೆಯ ಮುಖೇನ ಜನಪರ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಈ ಸಂದರ್ಭ ನಾಡಿನ ಜನರಿಗೆ ದಸರಾದ ಶುಭಾಶಯ ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಜನರು ಸ್ವಾಭಿಮಾನ ಹಾಗು ಗೌರವದಿಂದ ಬಾಳುವಂತಹ ಉತ್ತಮವಾದ ಕಾಲ ಬರಲಿ. ರಾಜ್ಯದ ಜನತೆ ಕೊರೊನಾ ಸಂಕಷ್ಟದಿಂದ ಹೊರಬಂದು ನೆಮ್ಮದಿಯ ಬದುಕು ಕಾಣಲಿ ಎಂದು ಹೇಳಿದರು.