ಬೆಂಗಳೂರು, ಅ.26 (DaijiworldNews/PY): ಸರ್ಕಾರ ಅನುದಾನ ಬಿಡುಗಡೆ ಮಾಡಿದ್ರೆ ತಾನೆ ಜನರಿಗೆ ಪರಿಹಾರದ ಹಣ ತಲುಪಲು ಸಾಧ್ಯ. ಹೋಗಲಿ ಇವರಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ಕೇಳುವ ಧೈರ್ಯವಾದರೂ ಇದೆಯಾ? ಅದೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೀದರ್ ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿನ್ನೆ ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ, ಅಲ್ಲಿ ಸುಮಾರು ಎರಡೂವರೆ ಲಕ್ಷ ಹೆಕ್ಟೇರ್ನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಮನೆ ಕುಸಿತ, ಜಾನುವಾರುಗಳ ಸಾವು, ಆಸ್ತಿ ಹಾನಿ ಹೀಗೆ ಒಟ್ಟು ಅಂದಾಜು ರೂ.2,000 ಕೋಟಿ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ, ಅಂದರೆ ಸುಮಾರು ರೂ.100 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಇದರ ಜೊತೆಗೆ ರಸ್ತೆಗಳು, ಶಾಲೆಗಳು, ಮನೆ, ಜಾನುವಾರು, ಆಸ್ತಿಪಾಸ್ತಿ ಎಲ್ಲವೂ ಸೇರಿ ಒಟ್ಟು ನಷ್ಟ ರೂ.700 ಕೋಟಿ ನಷ್ಟ ಸಂಭವಿಸಿದೆ ಎಂದು ಸರ್ಕಾರ ಅಂದಾಜಿಸಿದೆ ಎಂದಿದ್ದಾರೆ.
ಅಫ್ಜಲ್ಪುರ, ಜೇವರ್ಗಿ, ಶಹಾಪುರ, ಯಾದಗಿರಿ ಭಾಗಗಳ ಪ್ರವಾಹಪೀಡಿತ ಪ್ರದೇಶಗಳಿಗೆ ನಾನು ಇಂದು ಭೇಟಿ ನೀಡಲಿದ್ದೇನೆ. ಅಫ್ಜಲ್ಪುರ ಕ್ಷೇತ್ರದಲ್ಲಿ ಮೂರು ಸಣ್ಣನೀರಾವರಿ ಕೆರೆಗಳು ಒಡೆದು ಹೋಗಿ ನೂರಾರು ಎಕರೆ ಬೆಳೆ ನಷ್ಟವಾಗಿದೆ. ಕೃಷಿಭೂಮಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ರೈತರ ಬದುಕು ದುಸ್ತರವಾಗಿದೆ ಎಂದು ಹೇಳಿದ್ದಾರೆ.
ಕಲಬುರ್ಗಿ ಜಿಲ್ಲೆ ಆಗಸ್ಟ್ನಿಂದ ಈ ವರೆಗೆ ಮೂರು ಬಾರಿ ಪ್ರವಾಹದಿಂದ ಹಾನಿಗೊಳಗಾಗಿದೆ, ಇದರ ಜೊತೆಗೆ ಕೊರೊನಾದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಇಂತಹ ಕಷ್ಟಕಾಲದಲ್ಲಿ ರೈತರು, ಬಡವರ ಜೊತೆಗಿದ್ದು ಅವರಿಗೆ ಸಾಂತ್ವನ ಹೇಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ತಲೆ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ.
ಕಲಬುರ್ಗಿ ಜಿಲ್ಲೆಗೆ ಭೇಟಿನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಪರಿಹಾರ ಕಾರ್ಯಗಳಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ನಂತರ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ಹೊತ್ತ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಅಂತಾದ್ರೆ ಇನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸ್ಪಂದಿಸಬಹುದು? ಎಂದು ಪ್ರಶ್ನಿಸಿದ್ದಾರೆ.
ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್ನಿಕ್ಗೆ ಬಂದಂತೆ ಬಂದು ಹೋಗಿದ್ದಾರೆ, ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಿದ್ರು ಅವರಿಗೆ ಪ್ರವಾಹದ ಹಾನಿ ಎಷ್ಟು ಕಂಡಿದ್ಯೋ ಬಿಟ್ಟಿದ್ಯೋ ಅವರಿಗೆ ಗೊತ್ತು. ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿದ್ರೆ ವಾಸ್ತವ ಪರಿಸ್ಥಿತಿ ಅರಿವಾಗಿರೋದು, ಅದನ್ನೇ ಸರ್ಕಾರ ಮಾಡಿಲ್ಲ ಎಂದಿದ್ದಾರೆ.
ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಬೇಕು ಅಂತ ಕಾಯುತ್ತಾ ಇದ್ದರೆ ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬೇರೆ ಯಾರಿಗೂ ಸಿಗದೆ ವಾಪಾಸು ಹೋಗಿದ್ದಾರೆ. ಜನರ ಕಷ್ಟ ಕೇಳೋಕೆ ಸರ್ಕಾರದ ಪ್ರತಿನಿಧಿಗಳು ಯಾರೂ ಜನರ ಬಳಿ ಹೋಗ್ತಿಲ್ಲ ಅಂದರೆ ಜನರ ಪಾಲಿಗೆ ಸರ್ಕಾರ ಸತ್ತಿದೆ ಅಂತಲ್ಲವೇ? ಎಂದು ಕೇಳಿದ್ದಾರೆ.
ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಕಳೆದ ವರ್ಷದ ನೆರೆ ಪರಿಹಾರದ ಹಣವೇ ಇನ್ನೂ ಎಲ್ಲರನ್ನು ತಲುಪಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ರೆ ತಾನೆ ಜನರಿಗೆ ಪರಿಹಾರದ ಹಣ ತಲುಪಲು ಸಾಧ್ಯ. ಹೋಗಲಿ ಇವರಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ಕೇಳುವ ಧೈರ್ಯವಾದರೂ ಇದೆಯಾ? ಅದೂ ಇಲ್ಲ ಎಂದು ಹೇಳಿದ್ದಾರೆ.