ಬೆಂಗಳೂರು, ಅ. 26 (DaijiworldNews/SM): ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಸಿಎಂ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನನ್ನ ಅವಧಿಯಲ್ಲಿ ರಾಜ್ಯದ ಜನತೆಗೆ ಸಾಲದ ಹೊರೆ ನೀಡಿದ್ದೇನೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಈ ಕಾರಣದಿಂದಾಗಿ ಸತ್ಯ ಸಂಗತಿ ರಾಜ್ಯದ ಜನತೆಯ ಮುಂದಿಡುವುದು ನನ್ನ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ತನ್ನ ನಾಯಕರಿಗೆ ದೇಶ, ಧರ್ಮ, ಸಮಾಜ ಒಡೆಯುವ ತರಬೇತಿಯನ್ನಷ್ಟೇ ನೀಡಿದೆ. ಸರಿಯಾದ ತರಬೇತಿ ನೀಡಿದ್ದರೆ, ಅಜ್ಞಾನದ ಹೇಳಿಕೆ ನೀಡುತ್ತಿರಲಿಲ್ಲ. ತರಬೇತಿದಾರರ ಕೊರತೆಯಿದ್ದರೆ ನಾನೇ ಬಂದು ಪಾಠ ಮಾಡುತ್ತೇನೆ ಎಂಬ ಆಕ್ರೋಶದ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಇದರೊಂದಿಗೆ ಅಂಕಿಅಂಶಗಳನ್ನು ಕೂಡ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. 2008-09 ರಿಂದ 2013-14ರ ವರೆಗಿನ ಬಿಜೆಪಿ ಕರ್ನಾಟಕ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸಾಲದ ಪ್ರ ಮಾಣ ಶೇಕಡಾ 212ರಷ್ಟು ಹೆಚ್ಚಿತ್ತು. 2013-14ರಿಂದ 2018-19ರ ನಮ್ಮ ಸರ್ಕಾರದ ಅವಧಿಯಲ್ಲಿ ಸಾಲದ ಪ್ರ ಮಾಣ ಹೆಚ್ಚಿದ್ದು ಕೇವಲ ಶೇಕಡಾ 65ರಷ್ಟು ಮಾತ್ರ. ಹಿಂದಿನ ಅವಧಿಯ ಸಾಲವನ್ನು ಸೇರಿಸಿ ರಾಜ್ಯದ ಒಟ್ಟು ಸಾಲದ ಪ್ರಮಾಣ 2008-09ರಿಂದ 2013-14ರ ಅವಧಿಯಲ್ಲಿ ಶೇಕಡಾ 94.18ರಷ್ಟು ಹೆಚ್ಚಿದ್ದರೆ, 2013-14ರಿಂದ 2018-19ರ ಅವಧಿಯಲ್ಲಿ ಒಟ್ಟು ಸಾಲದ ಪ್ರಮಾಣ ಹೆಚ್ಚಿದ್ದು ಕೇವಲ ಶೇಕಡಾ 78.19ರಷ್ಟು ಮಾತ್ರ ಎಂದು ಅವರು ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ.