ಚೆನ್ನೈ, ಅ. 27 (DaijiworldNews/MB) : ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ಅವರು ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದ್ದರು ಎಂದು ದೂರಿ ದೋಳ್ ತಿರುಮಾವಳವನ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ತಮಿಳುನಾಡಿನ ಮುಟ್ಟುಕಾಡುದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ನಟಿ ಖುಷ್ಬೂ, ''ನಮ್ಮನ್ನು ಬಂಧಿಸಲಾಗಿದೆ... ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ಯಲಾಗಿದೆ. ಮಹಿಳೆಯರ ಘನತೆಗಾಗಿ ನಾವು ನಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲಿ ನಡೆಯುತ್ತೇವೆ. ದೌರ್ಜನ್ಯಕ್ಕೆ ನಾವು ಎಂದಿಗೂ ತಲೆಬಾಗುವುದಿಲ್ಲ. ಭಾರತ್ ಮಾತಾ ಕಿ ಜೈ!'' ಎಂದು ಹೇಳಿದ್ದಾರೆ.
ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಸೋಮವಾರ ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಟಿ ರಾಘವನ್ ಅವರನ್ನು ಮೇಲ್ಮರುವಥುರ್ ಸಮೀಪದ ಅಥುರ್ ಟೋಲ್ಗೇಟ್ನಲ್ಲಿ ಬಂಧಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ''ಇವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲಾಗಿದ್ದು ಬಳಿಕ ಬಿಡುಗಡೆ ಮಾಡಲಾಗುತ್ತದೆ'' ಎಂದು ಹೇಳಿದ್ದಾರೆ.