ಬೆಂಗಳೂರು, ಅ. 27 (DaijiworldNews/MB) : ''ದೇಶಭಕ್ತಿಯನ್ನು ಪ್ರಚೋದಿಸಲು ಮಾತ್ರವಲ್ಲದೆ ಅದನ್ನು ವ್ಯಕ್ತಪಡಿಸಲು ದೇಶಕ್ಕೆ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಗತ್ಯವಿದೆ'' ಎಂದು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸೋಮವಾರ ಪ್ರತಿಪಾದಿಸಿದರು.
ಇಲ್ಲಿನ ಶೇಷಾದ್ರಿಪುರ ನಗರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯಲ್ಲಿ ವಿಜಯದಶಮಿ ಆಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಕೃಷ್ಣ ಅವರು, ''ವ್ಯಕ್ತಿಯೋರ್ವರು ಮೊದಲು ದೇಶಭಕ್ತಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವ್ಯಕ್ತಪಡಿಸಬೇಕು'' ಎಂದು ಹೇಳಿದರು.
ಹಿರಿಯ ಸಮಾಜವಾದಿ ನಾಯಕ 60 ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದು 2017 ರವರೆಗೆ ಕಾಂಗ್ರೆಸ್ನಲ್ಲೇ ಇದ್ದರು. ಬಳಿಕ ಬಿಜೆಪಿಗೆ ಸೇರಿದರು.
1999-2004 ರ ನಡುವೆ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದ ಸಂದರ್ಭದ ಅವರ ಅಧಿಕಾರಾವಧಿಯನ್ನು ಇಂದಿಗೂ ಬೆಂಗಳೂರಿಗೆ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು. ಯುಪಿಎ -2 ರ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.
ಆರ್ಎಸ್ಎಸ್ ರಾಜಕೀಯ ಸಂಸ್ಥೆಯಲ್ಲ ಎಂದು ವಾದಿಸಿದ ಕೃಷ್ಣ, ''ಪ್ರಬಲ ದೇಶವನ್ನು ನಿರ್ಮಿಸುವ ದೂರದೃಷ್ಟಿಯೊಂದಿಗೆ ಆರ್ಎಸ್ಎಸ್ ಅನ್ನು 1925 ರಲ್ಲಿ ನಿರ್ಮಿಸಲಾಯಿತು. ಸ್ವಾತಂತ್ರ್ಯದ ನಂತರದ ಸವಾಲುಗಳಿಗೆ ದೇಶವನ್ನು ಸಿದ್ಧಪಡಿಸುವ ಸಂಘಟನೆಯನ್ನು ನಿರ್ಮಿಸುವುದು ಡಾ. ಹೆಡ್ಗೆವಾರ್ ಅವರ ದೂರದೃಷ್ಟಿಯಾಗಿದೆ. ಇದಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಲವಾಗಿ ನಂಬುವುದು 'ವಾಸುದೈವ ಕುತುಂಬಕಂ' (ಜಗತ್ತು ಒಂದು ಕುಟುಂಬ) ಎಂಬ ಪರಿಕಲ್ಪನೆಗೆ ಆರ್ಎಸ್ಎಸ್ ಪ್ರಮುಖವಾಗಿದೆ'' ಎಂದು ಹೇಳಿದರು.
''ಆರ್ಎಸ್ಎಸ್ನ ಕಾರ್ಯದ ಬಗ್ಗೆ ಗೌರವದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ'' ಎಂದೂ ಅವರು ಹೇಳಿದರು.
"ನಾನು ರಾಜಕೀಯ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದೇನೆ. ನಾನು ರಾಮಕೃಷ್ಣ ಆಶ್ರಮದಲ್ಲಿ ಬೆಳೆದಿದ್ದು ಪರಮಹಂಸ ಮತ್ತು ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದೇನೆ. ದೇಶಕ್ಕೆ ಎಂದಿಗಿಂತಲೂ ಇಂದು ಆರ್ಎಸ್ಎಸ್ ಅಗತ್ಯವಿದೆ ಎಂದು ನಾನು ನಂಬುತ್ತೇನೆ" ಎಂದು ಅವರು ಪುನರುಚ್ಚರಿಸಿದರು.
"ರಾಷ್ಟ್ರದ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಲಕ್ಷಾಂತರ ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ. ಇದು ದೇಶಪ್ರೇಮ. ಯುವಕರು ಜೀವನದ ಆರಂಭದಲ್ಲಿಯೇ ದೇಶವನ್ನು ಉತ್ತಮವಾಗಿ ತಿಳಿಯಲು ಆರ್ಎಸ್ಎಸ್ ಸಹಕಾರಿ" ಎಂದು ಹೇಳಿದರು.
"ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರು ಸೇರಿದಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಎಷ್ಟು ಸಮಯವನ್ನು ವಿನಿಯೋಗಿಸುತ್ತಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು" ಎಂದು ಅವರು ಹೇಳಿದರು.
''ಭಾರತದಲ್ಲಿ ಪ್ರಜಾಪ್ರಭುತ್ವ ಪ್ರಬಲವಾಗಿದೆ ಎಂದು ಒತ್ತಿಹೇಳಿದ ಕೃಷ್ಣ ಅವರು, ಚುನಾವಣಾ ಆಯೋಗದಂತಹ ಸಂಸ್ಥೆಗಳು ಪ್ರಜಾಪ್ರಭುತ್ವವನ್ನು ಕಾಪಾಡಲು ಬದ್ಧವಾಗಿವೆ'' ಎಂದು ಹೇಳಿದರು.
"ಅಟಲ್ ಬಿಹಾರಿ ವಾಜಪೇಯಿ ಬಹುಮತವನ್ನು ಕಳೆದುಕೊಂಡಾಗ, ಅವರು ನಗುಮುಖದಿಂದ ಅಧಿಕಾರವನ್ನು ಬಿಟ್ಟುಕೊಟ್ಟರು. ತ್ಯಜಿಸುವಾಗಲೂ ಆ ಶಾಂತ ಮನಸ್ಸು ಹಿಂದೂ ಧರ್ಮಕ್ಕೆ ಅಂತರ್ಗತವಾಗಿರುತ್ತದೆ. ಅಂತಹ ಸಮಚಿತ್ತತೆ ಇತರ ಸಂಸ್ಕೃತಿಗಳ ಭಾಗವಲ್ಲ" ಎಂದು ಅಭಿಪ್ರಾಯ ಪಟ್ಟರು.