ಶ್ರೀನಗರ, ಅ. 27 (DaijiworldNews/MB) : ''ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅರ್ಟಿಕಲ್ 370 ಪುನಃಸ್ಥಾಪನೆಯಾಗುವವರೆಗೂ ರಾಷ್ಟ್ರ ಧ್ವಜ ಹಿಡಿಯಲಾರೆ. ನಾನು ರಾಜ್ಯದ ಧ್ವಜವನ್ನು ಮತ್ತೆ ಸ್ಥಾಪನೆ ಮಾಡಿದ ನಂತರವೇ ರಾಷ್ಟ್ರಧ್ವಜವನ್ನು ಹಿಡಿಯುತ್ತೇನೆ'' ಎಂದು ಹೇಳಿಕೆ ನೀಡಿದ್ದ ಗೃಹ ಬಂಧನದಿಂದ ಮುಕ್ತಿ ಪಡೆದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿರುದ್ದ ಪಕ್ಷದ ನಾಯಕರೇ ತಿರುಗಿ ಬಿದ್ದಿದ್ದು ಈ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಮೂವರು ಹಿರಿಯ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪಿಡಿಪಿ ಹಿರಿಯ ನಾಯಕರಾದ ಟಿಎಸ್ ಭಜ್ವಾ, ವೇದ್ ಮಹಾಜನ್ ಹಾಗೂ ಹುಸೇನ್ ವಫ್ಫಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮದೇ ಪಕ್ಷದ ನಾಯಕಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ನಾಯಕರು, ''ನಮಗೆ ಮೆಹಬೂಬಾ ಮುಫ್ತಿ ಅವರು ಭಾರತದ ತ್ರಿವರ್ಣ ಧ್ವಜದ ಕುರಿತು ನೀಡಿದ ಹೇಳಿಕೆಯಿಂದ ನೋವಾಗಿದೆ. ಭಾರತದ ಆಡಳಿತದಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಕೂಡಾ ತ್ರಿವರ್ಣ ಧ್ವಜದೊಂದಿಗೆ ನಮ್ಮ ಸಂಬಂಧ ಗಾಢವಾದದ್ದು. ನಮಗೆ ಎಲ್ಲಕ್ಕಿಂತಲೂ ಮಿಗಿಲು ಭಾರತದ ತ್ರಿವರ್ಣ ಧ್ವಜ. ನಮ್ಮ ಹೋರಾಟ ಕೇಂದ್ರ ಸರ್ಕಾರದ ವಿರುದ್ದ, ಭಾರತದ ತ್ರಿವರ್ಣ ಧ್ವಜದ ವಿರುದ್ಧವಲ್ಲ'' ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದಾಗಿನಿಂದ ಗೃಹಬಂಧನದಲ್ಲಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇತ್ತೀಚೆಗೆ 14 ತಿಂಗಳ ಈ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಅವರು, ''ನಾನು ರಾಜ್ಯದ ಧ್ವಜವನ್ನು ಮತ್ತೆ ಸ್ಥಾಪನೆ ಮಾಡಿದ ನಂತರವೇ ರಾಷ್ಟ್ರಧ್ವಜವನ್ನು ಹಿಡಿಯುತ್ತೇನೆ'' ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ದೇಶದ್ರೋಹದ ಹೇಳಿಕೆ ನೀಡಿದ್ದು ಅವರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿತ್ತು.