ಮೈಸೂರು, ಅ. 27 (DaijiworldNews/MB) : ''ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ರಾಜ್ಯದಲ್ಲಿ ವಿಲನ್'' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.
ಮೈಸೂರು ದಸರಾಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಲು ಮಂಗಳವಾರ ನಗರದ ಸರಕಾರಿ ಅತಿಥಿಗೃಹದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರಿಗೆ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಸಿದ್ದರಾಮಯ್ಯ ವಿಲನ್ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ನಾನು ವಿಲನ್ ಅಲ್ಲ ಹೀರೊ ಎಂದು ಹೇಳುತ್ತಾರೆ. ನಿಮ್ಮ ಪ್ರಕಾರ ಸಿದ್ದರಾಮಯ್ಯ ಹೀರೊನ ವಿಲನಾ? ಎಂದು ಮಾಧ್ಯಮ ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್ ಅವರು, ''ನಿಜವಾಗಿ ಇವರು ಯಾರೂ ವಿಲನ್ ಅಲ್ಲ, ಯಡಿಯೂರಪ್ಪನವರೇ ವಿಲನ್'' ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಬಳಿಕ ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ''ಬಿಎಸ್ವೈ ಅವರು ರಾಜ್ಯದಲ್ಲಿ 17 ತಿಂಗಳು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಕೊರೊನಾ ಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಹಾಗಾಗಿ ರಾಜ್ಯಕ್ಕೆ ಯಡಿಯೂರಪ್ಪನವರೇ ಹಿರೋ ಅವರೇ ವಿಲನ್'' ಎಂದು ಹೇಳಿದ್ದಾರೆ.
''ಈ ಬಾರಿಯ ದಸರಾ ಮಹೋತ್ಸವ ಅಚ್ಚಳಿಯದೆ ನೆನಪಿನಲ್ಲಿ ಉಳಿಯುವ ದಸರಾ. ಈ ಕೊರೊನಾ ಕಾರಣದಿಂದಾಗಿ ಈ ವರ್ಷ ಸರಳವಾಗಿ ದಸರಾ ಆಚರಣೆ ಮಾಡಲಾಗಿದೆ. ಈ ಬಾರಿ ಕೊರೊನಾ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗಿದೆ'' ಎಂದು ಹೇಳಿದರು.