ಮೈಸೂರು, ಅ. 27 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯತಂತ್ರಿಗಳನ್ನು ನಡೆಸಲಾಗುತ್ತಿದೆ. ಚಿಂಕಿತ್ಸೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವ ಸಲುವಾಗಿ ಮೈಸೂರು ಡಿಸಿ ಅಧಿಕಾರಿಗಳ ತಂಡ ಸಿದ್ದಪಡಿಸಿದ್ದಾರೆ. ಈ ತಂಡವು ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮಂಗಳವಾರದಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎಎಸ್ಐ, ಚೆಸ್ಕಾಂ ಮತ್ತು ನೋಡಲ್ ಅಧಿಕಾರಿಗಳನ್ನೊಳಗೊಂಡ ತಂಡವು ಖಾಸಗಿ ಆಸ್ಪತ್ರೆಗಳ ಕುರಿತು ನಿಗಾವಹಿಸಬೇಕಾಗಿದ್ದು, ಪ್ರತಿನಿತ್ಯ ಆಸ್ಪತ್ರೆಗಳು ಪಡೆಯುತ್ತಿರುವ ಶುಲ್ಕದ ಮೇಲೆ ನಿಗಾ ವಹಿಸಬೇಕು. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು ಆದೇಶ ಮೀರಿ ಶುಲ್ಕ ಪಡೆಯುತ್ತಿದ್ದಾರೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಈಗಾಗಲೇ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರ ಸೂಚಿಸುವ ಸೋಂಕಿತರಿಗೆ ಮೀಸಲಿಡುವಂತೆ ಆದೇಶ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಇನ್ನು ರೋಗಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ ಅವರಿಂದ ಆಸ್ಪತ್ರೆಗಳು ಹೆಚ್ಚಿನ ದರವನ್ನು ಪಡೆಯುತ್ತಿದೆಯಾ ಎಂಬುವುದನ್ನು ಪರೀಕ್ಷಿಸಬೇಕು. ಒಂದೊಮ್ಮೆ ಹೆಚ್ಚಿನ ಶುಲ್ಕ ಪಡೆದಲ್ಲಿ ಅದನ್ನು ಮರಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದಾರೆ.