ಪಾಟ್ನಾ, ಅ. 28 (DaijiworldNews/MB) : ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಜನತೆಗೆ ಪ್ರಧಾನಿ ಮೋದಿ ಕೊರೊನಾ ಮುನ್ನೆಚ್ಚರಿಕೆಯನ್ನು ಕೈಗೊಳ್ಳಿ, ಪ್ರಜಾಪ್ರಭುತ್ವದ ಪರ್ವದಲ್ಲಿ ಭಾಗಿಯಾಗಿ ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, ''ಇಂದು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸುತ್ತಿನ ಮತದಾನವಾಗಲಿದೆ. ಕೊರೊನಾ ಮುನ್ನೆಚ್ಚರಿಕೆಯನ್ನು ಕೈಗೊಳ್ಳಿ, ಪ್ರಜಾಪ್ರಭುತ್ವದ ಪರ್ವದಲ್ಲಿ ಭಾಗಿಯಾಗಿ ಎಂದು ನಾನು ಎಲ್ಲ ಮತದಾರರಲ್ಲಿ ಕೋರುತ್ತೇನೆ. ಎರಡು ಗಜಗಳಷ್ಟು ಅಂತರ ಕಾಯ್ದುಕೊಳ್ಳುವುದನ್ನು ಗಮನದಲ್ಲಿರಿಸಿ, ಮಾಸ್ಕ್ ಧರಿಸಿ. ನೆನಪಿಡಿ ಮೊದಲು ಮತದಾನ ಮಾಡಿ'' ಎಂದು ಹೇಳಿದ್ದಾರೆ.
''ಬಿಹಾರದ 71 ಸ್ಥಾನಗಳಲ್ಲಿ ಇಂದು ಚುನಾವಣೆಗೆ ನಡೆಯುತ್ತದೆ. ಕೊರೊನಾ ಸಾಂಕ್ರಾಮಿಕದ ಮಧ್ಯೆ ಮೊದಲ ಸಾರ್ವತ್ರಿಕ ಚುನಾವಣೆಯಿದು. ಸಾಂಕ್ರಾಮಿಕ ರೋಗವನ್ನು ಸೋಲಿಸುವ ಅಗತ್ಯವಿದ್ದು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು. ಸುರಕ್ಷಿತವಾಗಿರಿ ಆದರೆ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿ'' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಟ್ವೀಟಿಸಿದ್ದಾರೆ.