ಬೆಂಗಳೂರು, ಅ.28 (DaijiworldNews/PY): ಕೊರೊನಾ ನಡುವೆ ಜನರ ಆರೋಗ್ಯದ ಹಿತದೃಷ್ಠಿಯ ಸಲುವಾಗಿ ಮಾರ್ಚ್ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಚುನಾವಣೆಯ ಮುಖೇನ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಇಂತಹ ಸಮಯದಲ್ಲಿ ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳಿಗೆ ತೊಂದರೆಯುಂಟಾಗಿದೆ. ಕೊರೊನಾದ ಈ ನಡುವೆ ಚುನಾವಣೆ ನಡೆದರೆ ಕೊರೊನಾ ಇನ್ನಷ್ಟು ಹೆಚ್ಚಾಗುವ ವಿಚಾರವನ್ನು ಅಲ್ಲಗಳೆಯುವುದು ಅಸಾಧ್ಯ. ಹಾಗಾಗಿ ಮಾರ್ಚ್ ತಿಂಗಳವರೆಗೂ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ತಜ್ಞರೂ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಚಳಿಗಾಲದ ವೇಳೆ ಕೊರೊನಾ ಹೇಗೆ ಹರಡುತ್ತದೆ ಎಂಬುದರ ವಿಚಾರವಾಗಿ ಇನ್ನು ತಿಳಿದುಕೊಳ್ಳಬೇಕಿದೆ. ಇಂತಹ ಸಮಯದಲ್ಲಿ ಚುನಾವಣೆ ನಡೆದರೆ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಕಷ್ಟವಾಗಬಹುದು ಎಂದಿದ್ದಾರೆ.
ಪ್ರಸ್ತುತ ವಿಧಾನಸಭೆಯ ಎರಡು ಹಾಗೂ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ವೇಳೆ ಜನರು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎನ್ನುವುದನ್ನು ಕಾಣಬಹುದಾಗಿದೆ. ಅಲ್ಲದೇ, ಸ್ಥಳೀಯ ಚುನಾವಣೆ ನಡೆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವುದು ಸೂಕ್ತ ಎಂದು ಹೇಳಿದ್ದಾರೆ.