ಕಲಬುರಗಿ, ಅ. 28 (DaijiworldNews/MB) : ಜನಪರ- ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿನ ಕುರಿತಾಗಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಅವರ ಹೇಳಿಕೆಗೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರ ಹಾಗೂ ಶಾಸಕರಾದ ಪ್ರಿಯಾಂಕ ಖರ್ಗೆ ಅವರು, ಡಿ.ವಿ.ಸದಾನಂದಗೌಡ ಅವರ ಹೇಳಿಕೆ ನಾಚಿಕೆಗೇಡಿನದ್ದು ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಮಾನ್ಪಡೆ ಸಾವಿಗೆ ಸಂಬಂಧಿಸಿ ಸದಾನಂದಗೌಡರು ನೀಡಿರುವ ಹೇಳಿಕೆ ನಾಚಿಕೆಗೇನದ್ದು. ಭಾರತದ ಬಿಜೆಪಿ ಸರ್ಕಾರ ಈ ಕೊರೊನಾ ಸಂದರ್ಭದಲ್ಲಿ ನಾಚಿಕೆಯಿಲ್ಲದೆ ಜಾರಿಗೆ ತಂದ ರೈತ ವಿರೋಧಿ ಮಸೂದೆಯ ವಿರುದ್ಧ ಅವರು ಹೋರಾಡಿದರು. ಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿ ಸರಕಾರ ಕೊಡುಗೆ ಏನು? ನೆರೆ ಹಾವಳಿ ಸಂದರ್ಭದಲ್ಲಿ ಭೇಟಿ ನೀಡಲಿಲ್ಲವೇಕೆ ?'' ಎಂದು ಪ್ರಶ್ನಿಸಿದ್ದಾರೆ.
''ರೈತ ಮುಖಂಡ ಮಾರುತಿ ಮಾನ್ಪಡೆ ಇತ್ತೀಚೆಗೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ, ಅವರ ಸಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಅವರು ಕಾರಣ. ಕಾಂಗ್ರೆಸ್ ಮುಖಂಡರು ಹಳ್ಳಿಯಲ್ಲಿದ್ದ ರೈತರನ್ನು ತಮ್ಮ ಸ್ವಾರ್ಥಕ್ಕಾಗಿ ಕರೆದುಕೊಂಡು ಬಂದು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು'' ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ''ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆಯನ್ನು ಡಿ ವಿ ಸದಾನಂದ ಗೌಡ ನೀಡಿದ್ದಾರೆ. ಹಾಗಿದ್ದರೆ ದೇಶದಲ್ಲಿ ಒಂದು ಕಾಲು ಲಕ್ಷ ಜನ ಕೊರೊನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ?'' ಎಂದು ಪ್ರಶ್ನಿಸಿದ್ದರು.