ಬೆಂಗಳೂರು, ಅ.28 (DaijiworldNews/PY): 'ಈಗಾಗಲೇ ಮುನಿರತ್ನರ 'ಭೀಭತ್ಸ', 'ರೌದ್ರ' ಮತ್ತು 'ಭಯಾನಕ' ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ 'ಶಾಂತ' ರಸ ಹೊರಬರಲಿದೆ' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಮಾರಾಟವಾಗಿರುವವರು ತಾಯಿಯನ್ನು ಮಾರಿದಂತೆ ಎಂದು ಕಾಂಗ್ರೆಸ್ ನಾಯಕರು ಮುನಿರತ್ನ ಅವರನ್ನು ಈ ಹಿಂದೆ ಟೀಕೆ ಮಾಡಿದ್ದರು. ಈ ಕಾರಣಕ್ಕಾಗಿ ಬಿಜೆಪಿ ಬೆಂಬಲಿಗರು ಮಂಗಳವಾರ ಕಾಂಗ್ರೆಸ್ನ ಚುನಾವಣಾ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಮುನಿರತ್ನ ಹಾಗೂ ಬಿಜೆಪಿಗರು ತಿಳಿಸಿದ್ದರು. ಈ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುನಿರತ್ನ ಅವರು, ''25 ವರ್ಷಗಳ ಹಿಂದೆ ತೀರಿಹೋದ ನನ್ನ ತಾಯಿಯ ಬಗ್ಗೆ ಮಾತನಾಡಬೇಡಿ'' ಎಂದು ಕಣ್ಣೀರು ಹಾಕಿದ್ದರು.
''ಕಾಂಗ್ರೆಸಿಗರು ಹೇಳಿರುವ ಮಾತನ್ನು ಹಿಂತೆಗೆದುಕೊಳ್ಳಲಿ ಎನ್ನುವ ಸಲುವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಧರಣಿ ಮಾಡಿದ್ದಾರೆ. ಬದಲಾಗಿ ಅದು ಹಲ್ಲೆ ಅಲ್ಲ. ಕಾಂಗ್ರೆಸಿಗರು ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾರೆ ಎಂಬ ಹೇಳಿಕೆ ಸರಿಯೇ. 25 ವರ್ಷಗಳ ಹಿಂದೆ ತೀರಿಹೋಗಿರುವ ತಾಯಿಯನ್ನು ನಾನು ಹೇಗೆ ಮಾರಾಟ ಮಾಡಲಿ?. ನನ್ನ ಬಗ್ಗೆ ಮಾತನಾಡಿ ಆದರೆ, ನನ್ನ ತಾಯಿಯ ಬಗ್ಗೆ ಮಾತನಾಡ ಬೇಡಿ. ಅವರನ್ನು ನಾನು ಎಲ್ಲಿಂದ ಕರೆದುಕೊಂಡು ಬರಲಿ'' ಎಂದು ಕಣ್ಣೀರಿಟ್ಟಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, "ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ 'ಕರುಣಾ' ರಸವನ್ನು ಹೊರ ಹಾಕಿ ನಟಿಸಿದ್ದಾರೆ. ಈಗಾಗಲೇ ಮುನಿರತ್ನರ 'ಭೀಭತ್ಸ', 'ರೌದ್ರ' ಮತ್ತು 'ಭಯಾನಕ' ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ 'ಶಾಂತ' ರಸ ಹೊರಬರಲಿದೆ" ಎಂದಿದ್ದಾರೆ.