ಮುಂಬೈ, ಅ. 28 (DaijiworldNews/MB) : ''ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಮೇಲೂ ಶ್ರೀನಗರದ ಲಾಲ್ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಯುವಕರನ್ನು ಪೊಲೀಸರು ಯಾಕೆ ಬಂಧಿಸಿದ್ದಾರೆ'' ಎಂದು ಶಿವಸೇನಾ ಪ್ರಶ್ನಿಸಿದೆ.
ತಮ್ಮನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತಿರುವ ಮೂವರನ್ನು ಸೋಮವಾರ ಶ್ರೀನಗರದ ಲಾಲ್ ಚೌಕ್ನಲ್ಲಿ ತ್ರಿವರ್ಣ ಹಾರಿಸಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನಾ, ''ಕೇಂದ್ರ ಸರ್ಕಾರವು ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎನ್ನುವ 'ನಕಲಿ ಧೈರ್ಯಶಾಲಿ'ಗೆ ಭದ್ರತೆ ನೀಡುತ್ತದೆ. ಆದರೆ ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಾರಿಸುವ ಯುವಕರನ್ನು ಪೊಲೀಸರು ಬಂಧಿಸುತ್ತಾರೆ. ಆ ರೀತಿಯ ಹೇಳಿಕೆ ನೀಡುವ ನಟಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡದ್ದಕ್ಕೆ ಆಕ್ರೋಶಕ್ಕೆ ಒಳಗಾಗಬೇಕು'' ಎಂದು ನಟಿ ಕಂಗನಾ ರಣಾವತ್ ಹೆಸರು ಉಲ್ಲೇಖಿಸದೆಯೇ ಟಾಂಗ್ ನೀಡಿದೆ.
''370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಬದಲಾವಣೆಯಾಗಿದೆ?, ಹಿಂದುತ್ವ ಅಂದರೆ ರಾಷ್ಟ್ರೀಯತೆ ಅಲ್ಲವೇ?'' ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು, ''ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಕಾಶ್ಮೀರದಲ್ಲಿ ಇನ್ನೂ ಕೂಡಾ ಪರಿಸ್ಥಿತಿ ಸುಧಾರಿಸಿಲ್ಲ ಎಂದು ತಿಳಿದು ಬರುತ್ತದೆ. ಮುಂಬೈನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದ್ದು ಇದು ಪಾಕಿಸ್ತಾನವಲ್ಲ. ಹಾಗಾದರೆ ಪಾಕ್ನ ಹಸ್ತಕ್ಷೇಪ ಇರುವೆಡೆ ತ್ರಿವರ್ಣ ಧ್ವಜವನ್ನು ಅವಮಾನಿಸುವುದು ಸರಿಯೇ'' ಎಂದು ಕೇಳಿದೆ.