ನವದೆಹಲಿ, ಅ.28 (DaijiworldNews/PY): ಕೊರೊನಾ ವೈರಸ್ ಹಿನ್ನೆಲೆ ಅಂತಾರಾಷ್ಟ್ರೀಯ ವಾಣಿಜ್ಯ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಬುಧವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ತಿಳಿಸಿರುವ ಡಿಸಿಐಜಿ, ಅನ್ಲಾಕ್ ಮಾರ್ಗಸೂಚಿಯಂತೆ ಪ್ರಯಾಣಿಕರ ವೈಮಾನಿಕ ಪ್ರಯಾಣಕ್ಕೆ ಅವಕಾಶವಿಲ್ಲ. ಇನ್ನು ಗೃಹ ಸಚಿವಾಲಯದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದು. ಕಾರ್ಗೋ ವಿಮಾನ ಸೇವೆಗೆ ಈ ನಿರ್ಬಂಧಗಳು ಅನ್ಯಯವಾಗುವುದಿಲ್ಲ ಎಂದು ಹೇಳಿದೆ.
ಕೊರೊನಾ ವೈರಸ್ ಹಿನ್ನೆಲೆ ಕೇಂದ್ರ ಸರ್ಕಾರವು ಲಾಕ್ಡೌನ್ ಘೋಷಣೆ ಮಾಡಿತ್ತು. ಈ ನಡುವೆ ಎಲ್ಲಾ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆಗಳಿಗೂ ಕೂಡಾ ನಿರ್ಬಂಧ ಹೇರಿತ್ತು.
ಇನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದ್ದು, ಈ ವಿಮಾನಗಳ ಹಾರಾಟಕ್ಕೆ ಯಾವುದೇ ರೀತಿಯಾದ ನಿರ್ಬಂಧವಿಲ್ಲ.