ಬೆಂಗಳೂರು, ಅ. 29 (DaijiworldNews/MB) : ಸಮಾಜಸೇವೆಯ ನೆಪದಲ್ಲಿ ದೇಣಿಗೆ ಸಂಗ್ರಹ ಮಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ ಬುಧವಾರ ಬೆಂಗಳೂರಿನ ಒಂದು ಸ್ಥಳ ಹಾಗೂ ಕಾಶ್ಮೀರದ ಒಟ್ಟು 10 ಪ್ರದೇಶಗಳ ಮೇಲೆ ಕೆಲವು ಸ್ವಯಂ ಸೇವಾ ಸಂಸ್ಥೆ ಮತ್ತು ಟ್ರಸ್ಟ್ಗಳ ಮೇಲೆ ಎನ್ಐಎ ದಾಳಿ ನಡೆಸಿದೆ.
ಶ್ರೀನಗರ, ಬಂಡಿಪೋರಾ ಹಾಗೂ ಬೆಂಗಳೂರಿನಲ್ಲಿ ಎನ್ಐಎ ಸ್ಥಳೀಯ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನೆರವಿನೊಂದಿಗೆ ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ, ಪರ್ವೇಜ್ ಅಹ್ಮದ್ ಮಟ್ಟಾ, ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್ಅಪಿಯರ್ಡ್ ಪರ್ಸನ್ಸ್ ಸಂಸ್ಥೆಯ ಮುಖ್ಯಸ್ಥೆ ಪ್ರರ್ವಿನಾ ಅಹಾಂಜರ್, ಎನ್ಜಿಒ ಅಥರೌಟ್ ಮತ್ತು ಜೆಕೆ ಟ್ರಸ್ಟ್ಗಳ ಕಚೇರಿ ಸೇರಿದಂತೆ ಹಲವರ ನಿವಾಸದ ಮೇಲೆ ದಾಳಿ ನಡೆದಿದೆ.
ಸಮಾಜ ಸೇವೆಯ ಉದ್ದೇಶದಿಂದ ದೇಶ ವಿದೇಶದ ಉದ್ಯಮಿಗಳಿಂದ ದೇಣಿಗೆ ಪಡೆದು ಈ ಎನ್ಜಿಒ ಹಾಗೂ ಟ್ರಸ್ಟ್ಗಳು ಭಯೋತ್ಪಾದಕ ಚಟುವಟಿಕೆಗಳಿಗೆ ನೀಡುತ್ತಿದ್ದವು ಎಂದು ಆರೋಪಿಸಲಾಗಿದೆ. ಈ ದಾಳಿಗಳನ್ನು ಪಿಡಿಪಿ ತೀವ್ರವಾಗಿ ಖಂಡಿಸಿದ್ದು ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪ ಮಾಡಿದೆ.