ನವದೆಹಲಿ, ಅ. 29 (DaijiworldNews/MB) : ''ಪೂರ್ವ ಲಡಾಖ್ನಲ್ಲಿ ಭಾರತೀಯ ಯೋಧರು ದೃಢವಾಗಿ ನಿಂತಿರುತ್ತಾರೆ. ಚೀನಾದೊಂದಿಗಿನ ಮಾತುಕತೆಗಳು ಕೂಡಾ ಮುಂದುವರೆಯಲಿದೆ'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೇನೆಯ ಹಿರಿಯ ಕಮಾಂಡರ್ ಸಮಾವೇಶದಲ್ಲಿ ಬುಧವಾರ ಮಾತನಾಡಿದ ಅವರು, ''ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹವಾಮಾನ ಬದಲಾವಣೆಯಾಗುತ್ತಲ್ಲೇ ಇರುವ ನಡುವೆಯೂ ಶತ್ರುಗಳ ವಿರುದ್ದವಾಗಿ ನಮ್ಮ ಯೋಧರು ಹೋರಾಡುತ್ತಿದ್ದಾರೆ. ಅವರಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಅಗತ್ಯ ವಸ್ತ್ರಗಳನ್ನು ನೀಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ. ನಮ್ಮ ಸೇನೆಯು ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಸ್ಫೂರ್ತಿದಾಯಕ ಸಂಸ್ಥೆಯಾಗಿದೆ'' ಎಂದು ಶ್ಲಾಘಿಸಿದರು.
''ಸೈನಿಕರಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತದೆ. ಪ್ರಸ್ತುತ ಸ್ಥಿತಿ ನಿರ್ವಹಣೆಗೆ ಸೇನೆ ಕೈಗೊಂಡ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ'' ಎಂದು ಹೇಳಿದ ಅವರು, ''ಮುಂದಿನ ದಿನಗಳಲ್ಲಿ ಭಾರತದ ಸಶಸ್ತ್ರ ಪಡೆಗಳು ಸವಾಲು ಎದುರಿಸುವಾಗ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್, ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಮತ್ತು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ಕಮಾಂಡ್ಗಳ ಪಾತ್ರ ಮುಖ್ಯ'' ಎಂದು ಹೇಳಿದರು.