ಬೆಂಗಳೂರು, ಅ.29 (DaijiworldNews/PY): ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಜ್ಞರ ಶಿಫಾರಸಿನಲ್ಲಿರುವ ಅವಧಿಯ ಪ್ರಕಾರವೇ ಆನ್ಲೈನ್ ತರಗತಿ ನಡೆಯಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಆನ್ಲೈನ್ ತರಗತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಶಾಲೆಗಳು ಪಾಲಿಸದೇ ಅಧಿಕ ಅವಧಿ ತರಗತಿಗಳನ್ನು ನಡೆಸುವ ಕಾರಣ ಮಕ್ಕಳ ಆರೋಗ್ಯ ಹಾಗೂ ದೃಷ್ಟಿಯ ಮೇಲೆ ಪರಿಣಾಮ ಉಂಟಾಗುತ್ತಿವೆ ಎನ್ನುವ ವರದಿಗಳು ಕೇಳಿ ಬಂದಿವೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಆನ್ಲೈನ್ ಶಿಕ್ಷಣದ ಕುರಿತಂತೆ ಸುತ್ತೋಲೆ ಹೊರಡಿಸಲಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರತಿ ತರಗತಿ ನಡುವೆ 30 ನಿಮಿಷ ವಿರಾಮ. 6 ಹಾಗೂ ನಂತರದ ತರಗತಿಗಳಿಗೆ ಅಗತ್ಯದ ಅನುಗುಣವಾಗಿ 30-45 ನಿಮಿಷ. ಇನ್ನು ವಯೋಮಾನ ಅನುಗುಣವಾಗಿ ದಿನಕ್ಕೆ ಒಂದರಿಂದ ನಾಲ್ಕು ಗರಿಷ್ಠ ಅವಧಿ, 2ನೇ ತರಗತಿಯವರಿಗೆ ವಾರದಲ್ಲಿ ಪರ್ಯಾಯ ದಿನಗಳಲ್ಲಿ ಶಿಕ್ಷಣ, 3ನೇ ತರಗತಿಯ ಬಳಿಕ ವಾರಕ್ಕೆ ಐದು ದಿನ ಗರಿಷ್ಠ, 2ನೇ ತರಗತಿಯವರಿಗೆ ತರಗತಿ ನಡೆಯುವ ವೇಳೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿ ಇರಬೇಕು ಎಂದು ತಿಳಿಸಿದ್ದಾರೆ.