ಪುಣೆ, ಅ. 29 (DaijiworldNews/MB) : ಅಂತಿಮ ಬಿಕಾಂ ಪದವಿ ಪರೀಕ್ಷೆಯಲ್ಲಿ ಜಿಹಾದಿ ಭಯೋತ್ಪಾದನೆ ಬಗ್ಗೆ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯ ಬಹಿರಂಗವಾಗಿ ಕ್ಷಮೆಯಾಚಿಸಿದೆ ಎಂದು ವರದಿಯಾಗಿದೆ.
ವಿಶ್ವವಿದ್ಯಾನಿಲಯದ ರಕ್ಷಣಾ ಬಜೆಟಿಂಗ್ ವಿಷಯದ ಆನ್ಲೈನ್ ಪ್ರಶ್ನೆಪತ್ರಿಕೆಯಲ್ಲಿ ಆಯ್ಕೆಯ ಪ್ರಶ್ನೆಯಲ್ಲಿ ಜಿಹಾದಿ ಭಯೋತ್ಪಾದನೆಗೆ ಮೂಲ ಕಾರಣಗಳು ಯಾವುದು ಎಂದು ಪ್ರಶ್ನೆ ಕೇಳಿ ಈ ಪ್ರಶ್ನೆಗೆ ಜಾಗತೀಕರಣ, ಶಸ್ತ್ರಾಸ್ತ್ರ ಪ್ರಸರಣ, ಇಸ್ಲಾಮಿಕ್ ತೀವ್ರಗಾಮಿತ್ವದ ಹೆಸರಿನಲ್ಲಿ ಹಿಂಸೆ ಬಳಕೆ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ.
ಈ ಬಗ್ಗೆ ಕ್ಷಮೆಯಚಿಸಿರುವ ಕುಲಪತಿ ಡಾ. ನಿತಿನ್ ಕರ್ಮಾಲ್ಕರ್ ಅವರು, ಈ ಪ್ರಶ್ನೆಯ ಕುರಿತಾಗಿ ಸಾಮಾಜಿಕ ಜಾಲತಾಣದ ಮೂಲಕ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಈ ಪ್ರಶ್ನೆಪತ್ರಿಕೆ ಸಿದ್ದ ಮಾಡಿದವರು ಮಾಡಿರಬಹುದಾದ ತಪ್ಪಿಗೆ ಇನ್ನಷ್ಟು ಸಂಕೀಣ ಪರಿಸ್ಥಿತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಾಗೆಯೇ ಇದಕ್ಕೆ ಸಂಬಂಧಿಸಿ ಅಧಿಕಾರಿಗಳ ಬಳಿ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.