ನವದೆಹಲಿ, ಅ.29 (DaijiworldNews/PY): ಆರೋಗ್ಯ ಸೇತು ಆಪ್ ಅನ್ನು ಅತ್ಯಂತ ಪಾರದರ್ಶಕವಾಗಿ ಅಭಿವೃದ್ದಿಪಡಿಸಲಾಗಿದ್ದು, ಇದು ಸುರಕ್ಷಿತವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೊರೊನಾ ಸಂದರ್ಭ ಹೆಚ್ಚು ಬಳಕೆಯಾದ ಆರೋಗ್ಯ ಸೇತು ಆಪ್ ಅನ್ನು ಅಭಿವೃದ್ದಪಡಿಸಿರುವ ವಿಚಾರದ ಬಗ್ಗೆ ಯಾವುದೇ ರೀತಿಯಾದ ಮಾಹಿತಿ ದೊರೆತಿಲ್ಲ ಎನ್ನುವ ಆರೋಪ ಕೇಳಿ ಬಂದ ನಿಟ್ಟಿನಲ್ಲಿ ಸ್ಪಷ್ಟನೆ ನೀಡಿರುವ ಸರ್ಕಾರ, ಆರೋಗ್ಯ ಸೇತು ಆಪ್ ಅನ್ನು ಅತ್ಯಂತ ಪಾರದರ್ಶಕವಾಗಿ ಅಭಿವೃದ್ದಿಪಡಿಸಲಾಗಿದ್ದು, ಇದು ಸುರಕ್ಷಿತವಾಗಿದೆ ಎಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಸಹಯೋಗದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ಯು ಆರೋಗ್ಯ ಸೇತು ಆಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ.
ಕೊರೊನಾ ಸಂದರ್ಭ ಸರ್ಕಾರ ಉತ್ತೇಜಿಸಿರುವ ಆರೋಗ್ಯ ಸೇತು ಆಪ್ನ ಸೃಷ್ಟಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸೌರವ್ ದಾಸ್ ಎಂಬವರು ಆರ್ಟಿಐನಡಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೆ, ಈ ವಿಚಾರವಾಗಿ ಸೂಚನೆ ನೀಡಿದ ರಾಷ್ಟ್ರೀಯ ಮಾಹಿತಿ ಆಯೋಗ, ನ.24ರಂದು ಸಂಬಂಧಪಟ್ಟ ಇಲಾಖೆಗೆ ಹಾಜರಾಗಿ ಮಾಹಿತಿ ನೀಡುವಂತೆ ತಿಳಿಸಿದೆ.