ಬೆಂಗಳೂರು, ಅ. 29 (DaijiworldNews/MB) : ಐ ಹಣಕಾಸು ಸಲಹಾ (ಐಎಂಎ) ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ಗೆ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯವು ಆಗಸ್ಟ್ 18 ರಂದು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿತ್ತು.
ಮನ್ಸೂರ್ ಖಾನ್ ಪರ ವಕೀಲರು, "ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ಮುಕ್ತಾಯಗೊಂಡಿದೆ. ಕಳೆದ ವರ್ಷ ಆಗಸ್ಟ್ 1 ರಿಂದ ಮನ್ಸೂರ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರ ರಕ್ತನಾಳದಲ್ಲಿ ಶೇ. 100 ಬ್ಲಾಕ್ ಆಗಿದೆ. ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ" ಎಂದು ಹೈಕೋರ್ಟ್ಗೆ ವಿವರಿಸಿದ್ದಾರೆ. ಈ ಸಂಬಂಧ ಅವರು ಮುಖ್ಯ ವೈದ್ಯಕೀಯ ಅಧಿಕಾರಿ ಹೊರಡಿಸಿದ ಪತ್ರವನ್ನೂ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸಲ್ಲಿಸಿದರು.
ಇಡಿ ಪರವಾಗಿ ವಾದಿಸುತ್ತಿದ್ದ ವಿಶೇಷ ಕಾನೂನು ಸಲಹೆಗಾರ ಮಧುಕರ್ ದೇಶ್ ಪಾಂಡೆ, "ಐಎಂಎ ಸಂಗ್ರಹಿಸಿದ 4,000 ಕೋಟಿ ರೂ.ಗಳಲ್ಲಿ 1,323 ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ. ಈ ಮಧ್ಯೆ, ಮನ್ಸೂರ್ ಅವರು 209 ಕೋಟಿ ರೂ.ಗಳ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅವರು ಅದನ್ನು ವರ್ಗಾಯಿಸುವ ಸಾಧ್ಯತೆಯಿದೆ. ಇದರಿಂದಾಗಿ ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ" ಎಂದು ವಾದಿಸಿದರು.
ಮುಖ್ಯ ವೈದ್ಯಕೀಯ ಅಧಿಕಾರಿ ಹೊರಡಿಸಿದ ಪತ್ರದ ಪ್ರಕಾರ, ಮನ್ಸೂರ್ ಖಾನ್ ಅವರಿಗೆ ನಿಯಮಿತ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಗಮನಿಸಿದ ಹೈಕೋರ್ಟ್ನ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು, "ವೈದ್ಯಕೀಯ ಅಧಿಕಾರಿ ಮನ್ಸೂರ್ ಅವರಿಗೆ ವಿವಿಧ ರೀತಿಯ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ವಿಷಯಗಳನ್ನು ಪರಿಗಣಿಸಿ ಮನ್ಸೂರ್ ಅವರಿಗೆ ಜಾಮೀನು ನೀಡಬಹುದು" ಎಂದು ಅಭಿಪ್ರಾಯಪಟ್ಟರು.
"ಹಾಗೆಯೇ 5 ಲಕ್ಷ ರೂ.ಗಳ ಬಾಂಡ್ ಮತ್ತು ಜಾಮೀನು ಮೊತ್ತ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆಸ್ತಿಯನ್ನು ವಿಲೇವಾರಿ ಮಾಡಬಾರದು. ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನ್ಸೂರ್ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗಬೇಕಾದರೆ, ಆ ನ್ಯಾಯಾಲಯದ ಅನುಮತಿಯನ್ನು ಪಡೆಯಬೇಕು. ಅನುಮತಿ ನೀಡುವಾಗ ನ್ಯಾಯಾಲಯವು ಷರತ್ತುಗಳನ್ನು ವಿಧಿಸಬಹುದುಎಂದು ನ್ಯಾಯಾಧೀಶರು" ಹೇಳಿದರು.