ಗುರುಗ್ರಾಮ್, ಅ.29 (DaijiworldNews/PY): ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಕ್ಷಯ ರೋಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಗುರುಗ್ರಾಮ್ನಲ್ಲಿ ನಡೆದಿದೆ.
ಶ್ವಾಸಕೋಶದ ಕ್ಷಯರೋಗದಿಂದ ಉಸಿರಾಟದ ತೊಂದರೆ ಎದುರಿಸುತ್ತಿದ್ದ ಯುವತಿಯೊಬ್ಬಳು ಇಲ್ಲಿನ ಫೋಟೀಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಈ ಸಂದರ್ಭ ಆಕೆಯನ್ನು ನೋಡಲು ಹೋದ ಪೋಷಕರಿಗೆ ಆಕೆ ಅತ್ಯಾಚಾರಿ ವಿಕಾಸ್ ಎಂದು ಬರೆದ ಚೀಟಿಯನ್ನು ನೀಡಿದ್ದಾಳೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿರುವ ವಿಚಾರ ತಿಳಿದುಬಂದಿದೆ.
ಘಟನೆಯ ಬಗ್ಗೆ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯನ್ನು ನೋಡಲು ಆಕೆಯ ಪೋಷಕರಿಗೆ ಹಾಗೂ ರೋಗಿಯ ಪರಿಚಾರಕರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರಿಗೆ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಶಂಕೆ ವ್ಯಕ್ತವಾಗಿದೆ.
ಯುವತಿಯ ಪೋಷಕರು ತಮ್ಮ ಮಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಇನ್ನೊಂದು ಕಡೆ ಫೋರ್ಟಿಸ್ ಆಸ್ಪತ್ರೆಯ ಆಡಳಿತ ಮಂಡಳಿಯು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಯುವತಿ ಚೀಟಿಯಲ್ಲಿ ಬರೆದಿರುವ ವಿಕಾಸ್ ಎನ್ನುವ ವ್ಯಕ್ತಿ ಆಸ್ಪತ್ರೆಯ ಸಿಬ್ಬಂದಿಯೋ ಆಥವಾ ಹೊರಗಿನ ವ್ಯಕ್ತಿಯೋ ಎನ್ನುವ ಬಗ್ಗೆ ಇನ್ನೂ ತಿಳಿದಿಲ್ಲ. ಇದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತೇವೆ ಎಂದು ಡಿಸಿಪಿ ಮಕ್ಸೂದ್ ಅಹ್ಮದ್ ಹೇಳಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಹೇಳಿಕೆಯನ್ನು ದಾಖಲಿಸು ತೆರಳಿದ ಪೊಲೀಸರಿಗೆ ಅನುಮತಿ ನೀಡದ ವೈದ್ಯರು, ಯುವತಿಯ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಆಕೆಯ ಹೇಳಿಕೆಯನ್ನು ದಾಖಲಿಸಲು ಅವಕಾಶ ನೀಡಲಾಗುವುದು. ಈಗ ಆಕೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.