ಬೆಂಗಳೂರು, ಅ. 29 (DaijiworldNews/MB) : ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದಕ್ಕೆ ಲೇವಡಿ ಮಾಡಿದ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿರುವ ಮುನಿರತ್ನ ಅವರು ನಾನು ಮತಕ್ಕಾಗಿ ಕಣ್ಣೀರು ಹಾಕಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಹಣಕ್ಕಾಗಿ ತೆರಳಿದ ಮುನಿರತ್ನ ಅವರು ತಾಯಿಯನ್ನು ಮಾರಿದಂತೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮುನಿರತ್ನ ಅವರು''25 ವರ್ಷಗಳ ಹಿಂದೆ ತೀರಿಹೋದ ನನ್ನ ತಾಯಿಯ ಬಗ್ಗೆ ಮಾತನಾಡಬೇಡಿ'' ಎಂದು ಹೇಳೀ ಕಣ್ಣೀರು ಹಾಕಿದ್ದರು.
ಈ ಹಿನ್ನೆಯಲ್ಲಿ ಕಾಂಗ್ರೆಸ್ ನಾಯಕರಾದ ಸಂಸದ ಡಿಕೆ ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಅವರು ಮುನಿರತ್ನ ಅವರ ಬಗ್ಗೆ ವ್ಯಂಗ್ಯವಾಡಿದ್ದರು. "ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ 'ಕರುಣಾ' ರಸವನ್ನು ಹೊರ ಹಾಕಿ ನಟಿಸಿದ್ದಾರೆ ಎಂದು ಗುಂಡೂರಾವ್ ಲೇವಡಿ ಮಾಡಿದ್ದರು.
ಕಾಂಗ್ರೆಸ್ ನಾಯಕರುಗಳ ಈ ಹೇಳಿಕೆಗೆ ತಿರುಗೇಟು ನೀಡಿರುವ ಮುನಿರತ್ನ ಅವರು, ನಾನು ಮತಕ್ಕಾಗಿ ಕಣ್ಣೀರು ಹಾಕಿಲ್ಲ. 25 ವರ್ಷದ ಹಿಂದೆ ತಾಯಿ ತೀರಿ ಹೋದ ನನ್ನ ತಾಯಿಯನ್ನು ನೆನೆದು ಕಣ್ಣೀರು ಹಾಕಿದೆ. ಕೆಲಸ ಮಾಡಿ ಮತ ಕೇಳುವ ವ್ಯಕ್ತಿ ನಾನು, ಕಣ್ಣೀರ ಮೇಲೆ ಮತ ಕೇಳಲ್ಲ ಎಂದು ಹೇಳಿದ್ದಾರೆ.
ಡಿ ಕೆ ಸುರೇಶ್ ಅವರು ಕಣ್ಣೀರು ಹಾಕಿದ್ದ ಸಂದರ್ಭದಲ್ಲಿ ನಾನು ಕನಿಕರ ವ್ಯಕ್ತಪಡಿಸಿದ್ದೆ. ಆದರೆ ಈಗ ಅವರು ವ್ಯಂಗ್ಯ ಮಾಡುತ್ತಾರೆ. ದಿನೇಶ್ ಗುಂಡೂರಾವ್ ರಾಜಕಾರಣಿಯೇ ಅಲ್ಲ. ತಂದೆಯ ಹೆಸರಲ್ಲೇ ಬದುಕುವವರ ಬಗ್ಗೆ ನಾವ್ಯಾಕೆ ಮಾತನಾಡೋದು ಎಂದು ಟಾಂಗ್ ನೀಡಿದ್ದಾರೆ.