ನವದೆಹಲಿ, ಅ. 29 (DaijiworldNews/MB) : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಮೂರು ವರ್ಷಗಳ ಹಿಂದೆ ಆರೋಪ ಮಾಡಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ತನ್ನ ಹೇಳಿಕೆಗೆ ಈಗ ಕ್ಷಮೆಯಾಚಿಸಿದ್ದಾರೆ. ಮಿಶ್ರಾ ಮಾಡಿದ ಆರೋಪದ ಆಧಾರದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ತನಿಖೆ ಆರಂಭಿಸಿತ್ತು.
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಸಚಿವ ಸತ್ಯೇಂದರ್ ಜೈನ್ ಅವರು ಮಿಶ್ರಾ ವಿರುದ್ದ ಮಾನ ನಷ್ಟ ಮೊಕ್ಕದಮೆ ದಾಖಲಿಸಿದ್ದರು. ಹಾಗೆಯೇ ಈ ಸುಳ್ಳು ಆರೋಪ ಮಾಡಿರುವವರು ಕ್ಷಮೆಯಾಚಿಸಿದರೆ ದೂರು ಹಿಂಪಡೆಯುವುದಾಗಿ ಹೇಳಿದ್ದರು.
ಈ ವರ್ಷದ ಆರಂಭದಲ್ಲಿ ಕಪಿಲ್ ಮಿಶ್ರಾ ಅವರು ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೋಮುವಾದಿ ಎಂದು ಆರೋಪಿಸಿದ್ದರು. ಆಮ್ ಆದ್ಮಿ ಪಕ್ಷದ ಹೆಸರನ್ನು ಮುಸ್ಲಿಂ ಲೀಗ್ ಎಂದು ಮರುನಾಮಕರಣ ಮಾಡಬೇಕು ಎಂದು ಹೇಳಿದರು. ಹಾಗೆಯೇ ಆಪ್ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ತಂತ್ರ ಹೂಡಿ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದರು. ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದ ಎಂದಿದ್ದರು.