ಬೆಂಗಳೂರು,ಅ. 29 (DaijiworldNews/HR): ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಗೂ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಕುಸುಮಾ ಅವರು ತಮ್ಮ ಜೀವನದ ಕಷ್ಟದ ದಿನಗಳನ್ನು ನೆನೆಸಿಕೊಂಡು, ತಮಗಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ಅವರು ತಮಗೆ ಇಂತಾ ಸ್ಥಿತಿ ತಂದುಕೊಂಡನಲ್ಲಾ ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಅಂತಾ ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲಾ ಅಂತಾ ನೆನೆಸಿಕೊಂಡು ಅತ್ತಿದ್ದಾರೆ ಎಂದರು.
ಮುನಿರತ್ನಅವರು ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧ ಭಾಷಣ ಮಾಡಿದ್ದರು, ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಅಂತಾ ಕಣ್ಣೀರಾಕಿರಬಹುದು ಎಂದರು.
ಇನ್ನು ಈ ಹಿಂದೆ ಮುನಿರತ್ನ ಅವರು ನಾನು ಮುಖ್ಯಮಂತ್ರಿ ಆಗಬೇಕು ಅಂತಿದ್ದರು, ಈಗ ಡಿ.ಕೆ ಶಿವಕುಮಾರ್ ಅವರ ಹಿಂದೆ ಯಾರೂ ಇಲ್ಲ ಅಂತಾ ಹೇಳಿದ್ದಾರೆ. ಒಟ್ಟಾರೆ ಅವರು ಪರಿಸ್ಥಿತಿಗೆ ತಕ್ಕಂತೆ ಅಭಿನಯಿಸುವ ನಟ ಅವರು ಎಂದು ಹೇಳಿದ್ದಾರೆ.