ಹುಬ್ಬಳ್ಳಿ, ಅ.30 (DaijiworldNews/PY): "ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾವು ಸಕಲ ಸಿದ್ದತೆಯಲ್ಲಿದ್ದೇವೆ. ಈ ಹಿನ್ನೆಲೆ ದೇಶದಲ್ಲಿ ಪುನಃ ಲಾಕ್ಡೌನ್ ಮಾಡುವಂತ ಅವಶ್ಯಕತೆ ಇಲ್ಲ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಪುನಃ ಲಾಕ್ಡೌನ್ ಮಾಡುವ ವಿಚಾರದ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವವಿಲ್ಲ. ಈಗಾಗಲೇ ನಾವು ಕೊರೊನಾ ನಿಯಂತ್ರಣಕ್ಕಾಗಿ ಸಕಲ ಸಿದ್ದತೆ ಮಾಡಿದ್ದು, ಈ ಹಿನ್ನೆಲೆ ಮತ್ತೆ ದೇಶದಲ್ಲಿ ಕೊರೊನಾ ಲಾಕ್ಡೌನ್ನ ಅಗತ್ಯ ಇಲ್ಲ" ಎಂದಿದ್ದಾರೆ.
ಬಿಜೆಪಿಯು ಶಿರಾ ಹಾಗೂ ಆರ್.ಆರ್ ನಗರ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದೆ ಎನ್ನುವ ಹೇಳಿಕೆ ನೀಡಿದ ಡಿಕೆಶಿ ಅವರಿಗೆ ತಿರುಗೇಟು ನೀಡಿರುವ ಅವರು, "ಡಿಕೆಶಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸಾಸ್ಪದವಾಗಿದೆ. ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಈಗ ಬೇಲ್ ಮೇಲೆ ಹೊರಗಡೆ ಬಂದಿದ್ದಾರೆ. ಈ ಬಗ್ಗೆ ಅವರು ಮೊದಲು ತಿಳಿದುಕೊಳ್ಳಲಿ. ಕೈ ಪಕ್ಷಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿದೆ" ಎಂದು ಹೇಳಿದ್ದಾರೆ.
ಪಾಕಿಸ್ತಾನ ಪಾರ್ಲಿಮೆಂಟ್ನಲ್ಲಿ ಪುಲ್ವಾಮಾ ದಾಳಿ ಬಗ್ಗೆ ಸಚಿವರೊಬ್ಬರ ಹೇಳಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಅಲ್ಲಿನ ಮಂತ್ರಿಗಳಿ ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದಾಗಿ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಮ್ಮ ಭಾರತ ದೇಶ ಸಾಕಷ್ಟು ಸದೃಢವಾಗಿದೆ ಎನ್ನುವ ವಿಚಾರ ಪಾಕ್ಗೆ ತಿಳಿದಿದೆ" ಎಂದು ತಿಳಿಸಿದ್ದಾರೆ.