ನವದೆಹಲಿ,ಅ.30 (DaijiworldNews/HR): ಪರವಾನಗಿ ಪಡೆದಿರುವ ವ್ಯಾಪಾರಿಗಳಿಗೆ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಹಸಿರು ಪಟಾಕಿ' ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ನಿರ್ದೇಶನ ನೀಡಲಾಗಿದ್ದು, ಈ ಬಗ್ಗೆ ಜಿಲಾಧಿಕಾರಿಗಳು ಮತ್ತು ಪೊಲೀಸರಿಗೆ ಗಮನಹರಿಸುವಂತೆ ದೆಹಲಿ ಸರ್ಕಾರದ ಪರಿಸರ ಖಾತೆ ಸಚಿವ ಗೋಪಲ್ ರೈ ತಿಳಿಸಿದ್ದಾರೆ.
ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪಟಾಕಿಗಳಿಂದ ಉಂಟಾಗಬಹುದಾದ ಮಾಲಿನ್ಯ ತಪ್ಪಿಸಲು ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಈ ಹಬ್ಬಗಳಂದು ರಾತ್ರಿ 8 ಗಂಟೆಯಿಂದ 10 ಗಂಟೆ ತನಕ ಪಟಾಕಿಗಳನ್ನು ಸಿಡಿಸಬಹುದು. ಕ್ರಿಸ್ಮಸ್ ಮತ್ತು ಹೊಸ ವರ್ಷದಂದು ರಾತ್ರಿ 11.55 ರಿಂದ 12.30 ತನಕ ಪಟಾಕಿ ಸಿಡಿಸಿ, ಸಂಭ್ರಮಿಸಬಹುದು ಎಂದು ಹೇಳಿದ್ದಾರೆ.
ಇನ್ನು ಪರವಾನಗಿ ಪಡೆದ ವ್ಯಾಪಾರಿಗಳು ಮಾತ್ರ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ಪಟಾಕಿಗಳನ್ನು ಮಾರಾಟ ಮಾಡಬಹುದು. ಇ-ಕಾಮರ್ಸ್ ವೆಬ್ಸೈಟ್ಗಳು ಆನ್ಲೈನ್ ಮೂಲಕ ಬೇಡಿಕೆ ಸ್ವೀಕರಿಸಬಹುದು. ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಡಿಸಿಪಿಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ನಿತ್ಯ ವರದಿಯನ್ನು ಡಿಪಿಸಿಸಿಗೆ ಸಲ್ಲಿಸಬೇಕು. ಅಲ್ಲದೆ ಡಿಪಿಸಿಸಿಗಳ 11 ವಿಶೇಷ ಪಡೆ ಮತ್ತು ನಗರ ಪೊಲೀಸರಿಗೆ ಉತ್ಪಾದನಾ ಘಟಕಗಳಲ್ಲಿ ಹಳೆಯ ಪಟಾಕಿಗಳನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.