ಧಾರವಾಡ,ಅ. 31 (DaijiworldNews/HR): ದಿನೇಶ್ ಗುಂಡೂರಾವ್ ಗೋವಾ ಭೇಟಿ ಸಂಧರ್ಭದಲ್ಲಿ ಮಹದಾಯಿ ವಿಷಯದಲ್ಲಿ ಗೋವಾ ಪರ ಮಾತನಾಡಿದ್ದಾರೆ. ಹಾಗಾಗಿ ದಿನೇಶ್ ಗುಂಡೂರಾವ್ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು, ಮಹಾದಾಯಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಇಡೀ ಕರ್ನಾಟಕಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಿನೇಶ್ ಗುಂಡೂರಾವ್ ಗೋವಾ ಭೇಟಿ ವೇಳೆ ಮಹದಾಯಿ ವಿಷಯದಲ್ಲಿ ಗೋವಾ ಪರ ಮಾತನಾಡಿದ್ದು, ಈ ಕುರಿತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು" ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿ ಮಹದಾಯಿ ಪರ ಹೋರಾಟ ಮಾಡುವ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ರಾಜ್ಯದ ವಿರುದ್ದ ಹೋರಾಟ ಮಾಡುತ್ತಿದೆ. ಮಹಾದಾಯಿ ವಿಷಯದಲ್ಲಿ ರಾಜ್ಯದ ಪರ ಸ್ಪಷ್ಟ ನಿಲುವು ಇಲ್ಲ. ಒಂದಾಗಿ ಕೆಲಸ ಮಾಡಿದರೆ ಐದು ನಿಮಿಷದಲ್ಲಿ ಮಹಾದಾಯಿ ವಿಚಾರದಲ್ಲಿ ಪರಿಹಾರ ಆಗುತ್ತದೆ. ಆದರೆ ಇದು ಕಾಂಗ್ರೆಸನವರಿಗೆ ಬೇಕಾಗಿಲ್ಲ ಎಂದರು.