ಬೆಂಗಳೂರು, ನ. 01 (DaijiworldNews/MB) : ಎಲ್ಲಾ ಶಿಕ್ಷಕರು ನವೆಂಬರ್ 1 ರಂದು ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಮತ್ತು ನವೆಂಬರ್ 2 ರಿಂದ ಶಾಲೆಗೆ ಹಾಜರಾಗುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರವು ಶಿಕ್ಷಕರಿಗೆ ಮಧ್ಯಂತರ ರಜಾದಿನಗಳನ್ನು ಘೋಷಿಸಿತ್ತು.
''ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಥವಾ ಸರ್ಕಾರ ಯಾವುದೇ ಆದೇಶವನ್ನು ನೀಡಿಲ್ಲ. ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶಾಲೆಗಳಲ್ಲಿ ಏನು ಮಾಡಬೇಕೆಂಬುದನ್ನು ಸ್ಪಷ್ಟಪಡಿಸಬೇಕು'' ಎಂದು ಶಿಕ್ಷಕರು ಶಿಕ್ಷಣ ಇಲಾಖೆಗೆ ಕೇಳಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆಯು, ''ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪ್ರಗತಿ ಮತ್ತು ಕಲಿಕೆಯಲ್ಲಿ ಅವರ ನ್ಯೂನತೆಗಳನ್ನು ದಾಖಲಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದು ಶಿಕ್ಷಕರು ಶಾಲೆಗೆ ಹಾಜರಾಗುವುದರಿಂದ ಶಾಲೆಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳ ದೌರ್ಬಲ್ಯಗಳ ಬಗ್ಗೆ ವಿಶೇಷವಾಗಿ ಗಮನಹರಿಸಲು ಸಹಾಯ ಮಾಡುತ್ತದೆ'' ಎಂದು ಹೇಳಿದೆ.
ಬೋಧನಾ ಅಧ್ಯಯನ ವಿಧಾನ ಮತ್ತು ಬೋಧನೆಗೆ ಬೇಕಾದ ಸಾಮಗ್ರಿಗಳು ಸೇರಿದಂತೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ತಿಳಿಸಿದೆ.
ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಆಯುಕ್ತರು ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಶಿಕ್ಷಣ ಅಧಿಕಾರಿಗಳೊಂದಿಗೆ ನವೆಂಬರ್ 2 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸುವ ಸಾಧ್ಯತೆಯಿದೆ.