ಶ್ರೀನಗರ, ನ. 02 (DaijiworldNews/MB) : ನಗರದ ಹೊರವಲಯದ ರಂಗ್ರೆತ್ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸೈಫುಲ್ಲಾ ಮಿರ್ ಅಲಿಯಾಸ್ ಘಾಜಿ ಹೈದರ್ನನ್ನು ಹೊಡೆದುರುಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನಡೆದ ಅನೇಕ ದಾಳಿಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಸೈಫುಲ್ಲಾ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯಲ್ಲಿ ಈತನ ಕೈವಾಡವಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಯಕ ರಿಯಾಜ್ ನಾಯ್ಕೂ ಹತ್ಯೆ ಮೇ ತಿಂಗಳಲ್ಲಿ ನಡೆದ ಬಳಿಕ ಈತನ ಈ ಉಗ್ರ ಸಂಘಟನೆಯ ನೇತೃತ್ವವನ್ನು ವಹಿಸುವ ಬಗ್ಗೆ ಮೇ 11ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಕ್ತಾರ ಸಲೀಂ ಹಶ್ಮಿ ಘೋಷಣೆ ಮಾಡಿದ್ದ.
ಸೈಫುಲ್ಲಾ ನಗರದ ಹೊರವಲಯದ ರಂಗ್ರೆತ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ನಲ್ಲಿ ಸೈಫುಲ್ಲಾನನ್ನು ಹತ್ಯೆಗೈದಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರದ ಐಜಿಪಿ ವಿಜಯಕುಮಾರ್, ಸೈಫುಲ್ಲಾನ ಹತ್ಯೆ ಭದ್ರತಾ ಪಡೆಗಳ ದೊಡ್ಡ ಯಶಸ್ಸು. ಕಾರ್ಯಾಚರಣೆಯಲ್ಲಿ ಮತ್ತೋರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗೆಯೇ ಪೊಲೀಸರು ಅಪಾರ ಪ್ರಮಾಣದ ಮದ್ದುಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಸೈಫುಲ್ಲಾನಿಗೆ ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ಈತ 2014ರಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದ.