ಆನೇಕಲ್, ನ.02 (DaijiworldNews/PY): ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ ಘಟನೆ ಆನೇಕಲ್ ತಾಲೂಕಿನ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ.
ಅವಡದೇವನಹಳ್ಳಿ ಗೋಪಿ ಹಾಗೂ ಗಂಗಾ ಎಂಬ ಇಬ್ಬರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು ಮುತ್ಯಾನಲ್ಲೂರಿನಲ್ಲಿ ಅನಂತ್ ಹಾಗೂ ಬಸವ ಎನ್ನುವ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.
ಅ.30ರಂದು ಇವರು ಅತ್ತಿಬೆಲೆಯ ಬಳಿಯ ಶೆಟ್ಟಿಹಳ್ಳಿಯಲ್ಲಿ ವಿನೀತ್ ಎಂಬಾತನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಆರೋಪಿಗಳ ಖಚಿತ ಮಾಹಿತಿಯ ಮೇರೆಗೆ ಆನೇಕಲ್ ಠಾಣಾ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಹಾಗೂ ಗೋಪಿಯನ್ನು ಬಂಧಿಸಲು ತೆರಳಿದ್ದು, ಈ ವೇಳೆ ಶರಣಾಗುವಂತೆ ಸೂಚನೆ ನೀಡಿದ್ದರು. ಆದರೆ, ಈ ವೇಳೆ ಆರೋಪಿಗಳು ಪೊಲೀಸ್ ಪೇದೆಗಳಾದ ಮಹೇಶ್ ಹಾಗೂ ಸುರೇಶ್ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭ ಆನೇಕಲ್ ಠಾಣೆ ಇನ್ಸ್ಪೆಕ್ಟರ್ ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಳಿಕ ಬಂಧಿಸಿದ್ದಾರೆ.
ಮುತ್ಯಾನಲ್ಲೂರಿನಲ್ಲೂ ಕೂಡಾ ಆರೋಪಿಗಳಾದ ಅನಂತ್ ಹಾಗೂ ಬಸವ ಇರುವ ಖಚಿತ ಮಾಹಿತಿಯ ಮೇರೆಗೆ ಅತ್ತಿಬೆಲೆ, ಸರ್ಜಾಪುರ ಠಾಣೆ ಪೊಲೀಸರು ಬಂಧಿಸಲು ತೆರಳಿದ್ದು, ಶರಣಾಗುವಂತೆ ತಿಳಿಸಿದ್ದರು. ಈ ವೇಳೆ ಇವರು ಕೂಡಾ ಪೊಲೀಸ್ ಪೇದೆಗಳಾದ ಇರ್ಫಾನ್, ನಾಗರಾಜ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಸಿದ್ದರು. ಆದರೆ, ಈ ಸಂದರ್ಭ ಅತ್ತಿಬೆಲೆ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಹಾಗೂ ಸರ್ಜಾಪುರ ಎಸ್ಐ ಹರೀಶ್ ಅವರಿಂದ ಫೈರಿಂಗ್ ನಡೆದಿದ್ದು, ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.