ತಿರುವನಂತಪುರ, ನ.03 (DaijiworldNews/PY): "ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿವೆ" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯವು ಕೇರಳದ ಮಹತ್ವದ ಮೂಲಸೌಕರ್ಯ ಯೋಜನೆಗಳ ಬಗ್ಗೆ ವಿವರ ಕೇಳಿರುವ ಸಂದರ್ಭ ಪಿಣರಾಯಿ ವಿಜಯನ್ ಅವರು ಈ ಆರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರ ಮಾಜಿ ಕಾರ್ಯದರ್ಶಿ ಎಂ.ಶಂಕರ್ ಅವರನ್ನು ಬಂಧಿಸಿರುವ ಕಾರಿ ನಿರ್ದೇಶನಾಲಯ, ಮಹತ್ವದ ಯೋಜನೆಗಳ ವಿಚಾರವಾಗಿ ಮಾಹಿತಿ ಕೇಳಿರುವುದು ಪಿಣರಾಯಿ ವಿಜಯನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜಾರಿ ನಿರ್ದೇಶನಾಲಯವು ಕೇರಳ ಆಪ್ಟಿಕ್ ಫೈಬರ್ ನೆಟ್ವರ್ಕ್ ಯೋಜನೆ ಬಗ್ಗೆ ಮಾಹಿತಿ ಕೇಳಿದೆ ಎನ್ನಲಾಗಿದೆ.
ಈ ಬಗ್ಗೆ ಟೀಕೆ ಮಾಡಿದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು, "ಚಿನ್ನ ಕಳ್ಳಸಾಗಣೆಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಿಂದ ತಮ್ಮಗೆ ಆಪತ್ತು ಎದುರಾಗಬಹುದು ಎನ್ನುವ ಭಯ ಪಿಣರಾಯಿ ವಿಜಯನ್ ಅವರಿಗೆ ಉಂಟಾಗಿರುವುದು ಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ.
"ಸಿಎಂ ಅವರಿಗೆ ತನಿಖಾ ಸಂಸ್ಥೆಗಳು ತಮ್ಮ ಕಚೇರಿಗೆ ಬರಬಹುದು ಎನ್ನುವ ಸುಳಿವು ಸಿಕ್ಕಿದೆ. ಈ ಹಿನ್ನೆಲೆ ಆರೋಪ ಮಾಡುತ್ತಿದ್ದಾರೆ" ಎಂದಿದ್ದಾರೆ.
"ಪ್ರಕರಣದ ಸಂಬಂಧ ತನಿಖೆಯ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು ವಿಜಯನ್ ಅವರ ಭಯಕ್ಕೆ ಕಾರಣವಾಗಿದೆ" ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.