ತಿರುವನಂತಪುರ, ನ.03 (DaijiworldNews/PY): ಕೇರಳದ ವಯನಾಡ್ ಜಿಲ್ಲೆಯಲ್ಲಿ ಪೊಲೀಸ್ ಪಡೆಯ ಥಂಡರ್ಬೋಲ್ಟ್ ಕಮಾಂಡೊ ಮಂಗಳವಾರ ಬೆಳಗ್ಗೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಶಂಕಿತ ಮಾವೊವಾದಿ ಸಾವನ್ನಪ್ಪಿದ್ದಾನೆ.
ಸಾಂದರ್ಭಿಕ ಚಿತ್ರ
ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂದಿನಂತೆ ಥಂಡರ್ಬೋಲ್ಟ್ ಕಮಾಂಡೊಗಳು ಬಣಾಸುರಮಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭ ಕಮಾಂಡೊಗಳು ಮೂವರು ಶಂಕಿತ ಮಾವೊವಾದಿಗಳನ್ನು ಪತ್ತೆಹಚ್ಚಿದ್ದಾರೆ.
ಕಮಾಂಡಗಳು ಹಾಗೂ ಶಂಕಿತ ಮಾವೊವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭ ಓರ್ವ ವ್ಯಕ್ತಿ ಮೃತಪಟ್ಟು, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಘಟನೆ ನಡೆದ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾವನ್ನಪ್ಪಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸಾವನ್ನಪ್ಪಿರುವ ವ್ಯಕ್ತಿ ಮಲಯಾಳಿ ಅಲ್ಲ ಎಂದು ಶಂಕಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಂಬಿಂಗ್ ನಡೆಸಿದ್ದಾರೆ.
ವಯನಾಡಿನ ವೈತಿರಿ ಬಳಿ ಲಕ್ಕಿಡಿಯ ರೆಸಾರ್ಟ್ನಲ್ಲಿ ಮಾವೊವಾದಿ ಸ್ಥಳೀಯ ಮುಖಂಡ ಸಿ.ಪಿ.ಜಲೀಲ್ನನ್ನು ಹತ್ಯೆಗೈಯಲಾಗಿತ್ತು. ಈ ಹತ್ಯೆಯನ್ನು ನಕಲಿ ಎನ್ಕೌಂಟರ್ ಎಂದು ಆರೋಪಿಸಲಾಗಿತ್ತು.
ಈ ಘಟನೆಯ ಬಗ್ಗೆ ಕಾಂಗ್ರೆಸ್ ಆರೋಪಿಸಿದ್ದು, ಇದೊಂದು ನಕಲಿ ಎನ್ಕೌಂಟರ್. ಮಾವೊವಾದಿಗಳನ್ನು ಪಿಣರಾಯಿ ವಿಜಯನ್ ಸರ್ಕಾರ ಹತ್ಯೆಗೈಯುತ್ತಿದೆ ಎಂದಿದೆ.