ಬಿಹಾರ, ನ. 03 (DaijiworldNews/MB) : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ್ತೊಮ್ಮೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ದ ವಾಗ್ದಾಳಿ ನಡೆಸಿದ್ದು, ''ಜನರು 'ಡಬಲ್ ಯುವರಾಜ ಮತ್ತು ಜಂಗಲ್ ರಾಜ' ನನ್ನು ತಿರಸ್ಕರಿಸಿದ್ದಾರೆ. ದೇಶದ ಬಡ ಜನರು ಅವರ ಪ್ರಧಾನ ಸೇವಕನಾಗಿ ಸೇವೆ ಸಲ್ಲಿಸಲು ನನಗೆ ಮತನೀಡಿದ್ದಾರೆ'' ಎಂದು ಹೇಳಿದ್ದಾರೆ.
ಮಂಗಳವಾರ ಬಿಹಾರ ಚುನಾವಣೆ ಹಿನ್ನೆಲೆ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಡವರಿಗೆ ಮತದಾನದ ಹಕ್ಕು ಸಿಗದಿದ್ದರೆ, ನಾನು ಜನರ ಸೇವೆ ಮಾಡಲು ಪ್ರಧಾನ ಸೇವಕ ಆಗುತ್ತಿರಲಿಲ್ಲ" ಎಂದು ಹೇಳಿದರು.
ಆರ್ಜೆಡಿಯ 15 ವರ್ಷಗಳ ಆಳ್ವಿಕೆಯ ಬಗ್ಗೆ ಮಾತನಾಡಿದ ಅವರು, "ಚುನಾವಣೆಗಳನ್ನು ತಮಾಷೆಯಾಗಿ ಮಾಡಿದ ಆ ದಿನಗಳನ್ನು ಬಿಹಾರ ಮರೆಯಲು ಸಾಧ್ಯವಿಲ್ಲ. ಅವರಿಗೆ ಚುನವಾಣೆ ಎಂದರೆ ಹಿಂಸೆ, ಕೊಲೆ ಹಾಗೂ ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದಾಗಿದೆ" ಎಂದು ದೂರಿದರು.
"ಜಂಗಲ್ ರಾಜ್" ನ ಜನರು ಬಡವರ ಹಕ್ಕುಗಳನ್ನು ಬಡವರನ್ನು ಮನೆಯೊಳಗೆಯೇ ಬಂಧಿಯಾಗಿರಿಸುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದರು. ಬಳಿಕ ಎನ್ಡಿಎ ಎಲ್ಲಾ ಬಡವರಿಗೆ ಮತದಾನದ ಹಕ್ಕನ್ನು ನೀಡಿತು. ಈಗ ಜನರಿಗೆ ತಮ್ಮ ಪ್ರತಿನಿಧಿ ಮತ್ತು ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕಿದೆ" ಎಂದು ಮೋದಿ ಹೇಳಿದರು.
"ಬಿಹಾರದ ಜನರು ಜಂಗಲ್ ರಾಜ ಮತ್ತು ಡಬಲ್ ಯುವರಾಜನನ್ನು ತಿರಸ್ಕರಿಸಿದ್ದಾರೆ" ಎಂದು ಇದೇ ವೇಳೆ ಮತ್ತೆ ರಾಹುಲ್ ಹಾಗೂ ತೇಜಸ್ವಿಯ ಹೆಸರು ಹೇಳದೆಯೇ ಅವರ ಕಾಲೆಳೆದಿದ್ದಾರೆ.
"ಬಿಹಾರದ ಜನರಿಗೆ ಯಾರು ಅಭಿವೃದ್ಧಿ ಮಾಡುತ್ತಾರೆ ಎಂದು ತಿಳಿದಿದೆ. ದುರಹಂಕಾರವನ್ನು ಸೋಲಿಸಲಾಗುತ್ತಿದೆ. ಇಂದು ಕುಟುಂಬದ ಆಡಳಿತವನ್ನು ಸೋಲಿಸಲಾಗುತ್ತಿದೆ. ಪ್ರಜಾಪ್ರಭುತ್ವ, ಅಭಿವೃದ್ಧಿ ಗೆಲ್ಲುತ್ತಿದೆ" ಎಂದರು.
ಬಿಹಾರದ ಮಹಿಳೆಯರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ನಾನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇನೆ. ನಾವು ಏನೇ ಆದರೂ ಮೋದಿಯನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದ್ದಾರೆಂದು ಮೋದಿ ಹೇಳಿದರು.
ಕೊರೊನಾದ ಮಧ್ಯೆಯೂ ಜನರು ಮತ ಚಲಾಯಿಸಲು ಬಂದ ಕಾರಣದಿಂದಾಗಿ ಜನರಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಚುನಾವಣಾ ಆಯೋಗದ ಅಧಿಕಾರಿಗಳನ್ನು ಪ್ರಶಂಸಿಸಿ ಧನ್ಯವಾದ ತಿಳಿಸಿದರು.
ಬಿಹಾರದಲ್ಲಿ ಮೂರನೇ ಹಂತದ ಚುನವಾಣೆಯು ನವೆಂಬರ್ 7 ರಂದು ನಡೆಯಲಿದೆ. ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ.