ಹಾಸನ,ನ. 04 (DaijiworldNews/HR): ರೌಡಿ ಶೀಟರ್ ಸುನಿಲ್ ಎಂಬಾತ ಹಾಸನದ ಹೊರವಲಯದ ಕೃಷ್ಣ ನಗರ ಎಂಬಲ್ಲಿ ಗ್ರಾಮಾಂತರ ಠಾಣೆ ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಆರೋಪಿ ಸುನಿಲ್ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್, ದೊಡ್ಡ ಮಂಡಿಗನಹಳ್ಳಿ ಪ್ರತಾಪ್, ಸೂರಿ, ರವಿ, ಸಂತೋಷ್ ಹಾಗೂ ಆಲೂರು ತಾಲ್ಲೂಕಿನ ಸತೀಶ್ ಅ. 23ರಂದು ಮೂರು ಮಂದಿ ಮೇಲೆ ದಾಳಿ ಮಾಡಿ, ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪಿಎಸ್ಐ ಬಸವರಾಜ್, ಆರೋಪಿಗಳು ಕೃಷ್ಣ ನಗರದ ಬಳಿ ಇರುವುದನ್ನು ದೃಢಪಡಿಸಿಕೊಂಡು ಬಂಧಿಸಲು ತೆರಳಿದ್ದು, ಈ ವೇಳೆ ಸುನಿಲ್ ತಪ್ಪಿಸಿಕೊಳ್ಳಲು ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ. ಬಸವರಾಜ್ ಅವರ ಹೊಟ್ಟೆ ಮತ್ತು ಎಡಗೈಗೆ ಗಂಭೀರ ಗಾಯವಾಗಿದ್ದು, ರಕ್ಷಣೆಗಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತದ ಸಿಪಿಐ ಪಿ.ಸುರೇಶ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.