ಬೆಂಗಳೂರು, ನ. 04 (DaijiworldNews/HR): ''ಕರ್ನಾಟಕದಲ್ಲಿ ಲವ್ ಜಿಹಾದ್ ತಡೆಗೆ ಆದಷ್ಟು ಬೇಗ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದ್ದು, ಬೇರೆ ಬೇರೆ ರಾಜ್ಯಗಳ ನಿರ್ಧಾರಗಳ ಆಧಾರದ ಮೇಲೆ ನಾವು ತೀರ್ಮಾನ ತೆಗೆದುಕೊಳ್ಳಲಿದ್ದೇವೆ'' ಎಂಬುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇತ್ತೀಚೆಗೆ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕಾರ್ಯಾಚರಣೆ ಮಾಡುತ್ತಿದೆ. ಲವ್ ಜಿಹಾದ್ ಹೆಸರಿನಿಂದ ಮತಾಂತರ ಸರಿಯಲ್ಲ ಎಂದು ಅಹಮದಾಬಾದ್ ಹೈಕೋರ್ಟ್ ಕೂಡಾ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ಈಗಿರುವ ಕಾನೂನು ಅಲ್ಲದೇ ವಿಶೇಷ ಕಾನೂನು ಆಗಬೇಕೆಂದು ಆರಂಭಿಸಿದ್ದು ಕೆಲವು ರಾಜ್ಯಗಳು ಘೋಷಣೆ ಕೂಡಾ ಮಾಡಿವೆ. ಹಾಗಾಗಿ ಬೇರೆ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ ಎಲ್ಲಾ ಸಲಹೆ ಸೂಚನೆ ಆಧಾರದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ನಿನ್ನೆ ಟ್ವೀಟ್ ಮಾಡಿದ್ದ ಸಿ.ಟಿ ರವಿ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ''ಕರ್ನಾಟಕವೂ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರಗೊಳ್ಳುವುದನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಗೆ ಧಕ್ಕೆ ತಂದಾಗ ನಾವು ಮೌನವಾಗಿರುವುದಿಲ್ಲ. ಮತಾಂತರದ ಕೃತ್ಯದಲ್ಲಿ ಭಾಗಿಯಾಗಿರುವ ಯಾರಾದರೂ ಕಠಿಣ ಮತ್ತು ತ್ವರಿತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ'' ಎಂದು ಹೇಳಿದ್ದಾರೆ.