ಬೆಂಗಳೂರು, ನ. 05 (DaijiworldNews/MB) : 'ಲವ್ ಜಿಹಾದ್' ಅನ್ನು ತಡೆಯಲು ಕಾನೂನು ಜಾರಿಗೆ ತರುವುದು ಅಗತ್ಯವಾಗಿದೆ ಎಂದು ಕರ್ನಾಟಕ ಸಚಿವ ಸಿ. ಟಿ. ರವಿಯವರು ಟ್ವೀಟ್ ಮಾಡಿದ ಬಳಿಕ ರಾಜ್ಯದಲ್ಲಿ ಲವ್ ಜಿಹಾಸ್ ತಡೆಗೆ ಕಾನೂನು ಜಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಬುಧವಾರ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಲವ್ ಜಿಹಾದ್ ತಡೆಗೆ ಆದಷ್ಟು ಬೇಗ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು. ಹಾಗೆಯೇ ಬಿಜೆಪಿ ನಾಯಕರುಗಳು ಕೂಡಾ ಲವ್ ಜಿಹಾದ್ ತಡೆಗೆ ಕಾನೂನು ರೂಪಿಸಲು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ''ಕೆಲವು ವರ್ಷಗಳಿಂದ ಇಂತಹ ಕಾನೂನು ಜಾರಿಗೆ ತರುವ ಸಾಧ್ಯತೆಯ ಬಗ್ಗೆ ಪಕ್ಷ ಚರ್ಚಿಸುತ್ತಿದೆ. "ಅಲಹಾಬಾದ್ ಹೈಕೋರ್ಟ್ ಅಂತರ್-ಧಾರ್ಮಿಕ ವಿವಾಹಗಳ ಸಲುವಾಗಿ ಮತಾಂತರದ ವಿರುದ್ಧ ಆದೇಶವನ್ನು ಜಾರಿಗೊಳಿಸುವುದರಿಂದ ಈ ಕಾನೂನು ಜಾರಿಗೆ ಮತ್ತಷ್ಟು ಬಲಬಂದಿದೆ" ಎಂದು ಹೇಳಿದ್ದಾರೆ.
''ಇತ್ತೀಚಿನ ದಿನಗಳಲ್ಲಿ ಸಂಘಟಿತ ಗುಂಪುಗಳು ಯುವಕರನ್ನು ಮತಾಂತರಗೊಳಿಸುವ ಮೂಲಕ ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನಿಂದ ಇದನ್ನು ಎತ್ತಿ ತೋರಿಸಲಾಗಿದೆ. ಈ ವಿಚಾರವಾಗಿ ಆಡಳಿತ ಪಕ್ಷವು ವಿವಿಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ'' ಎಂದು ಅವರು ಹೇಳಿದರು.
ಹಾಗೆಯೇ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ''ಬೇರೆ ಧರ್ಮದವರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುವವರ ಮೇಲೆ ಭಯೋತ್ಪಾದನೆಯ ಕೃತ್ಯಗಳಡಿ ಪ್ರಕರಣ ದಾಖಲಿಸಬೇಕು" ಎಂದು ಆಗ್ರಹಿಸಿದ್ದಾರೆ.