ನವದೆಹಲಿ,ಫೆ 01 (MSP): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ತನ್ನ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಎನ್ ಡಿಎ ಸರ್ಕಾರಕ್ಕೆ ಕೊನೆಯ ಬಜೆಟ್ ಆಗಿರುವುದರಿಂದ ಜನಸ್ನೇಹಿ ಬಜೆಟ್ ಹಾಗೂ ಮತದಾರರ ಸೆಳೆಯವಂತಹ ಜನಪ್ರಿಯ ಘೋಷಣೆಗಳನ್ನು ಬಜೆಟ್ ನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಇದಲ್ಲದೆ ಈ ಬಾರಿಯ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಭಾರಿ ಭರವಸೆಗಳು, ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೇರ ಆದಾಯದ ಪ್ಯಾಕೇಜ್ ಘೋಷಣೆ, ಗ್ರಾಮೀಣ ಭಾರತಕ್ಕೆ ನೆರವಿನ ಯೋಜನೆಗಳು, ವೇತನದಾರರಿಗೆ ಅನುಕೂಲ ಆಗುವ ಕಾರ್ಯಕ್ರಮಗಳು ಇರಬಹುದು ಎಂದು ಭಾವಿಸಲಾಗಿದೆ. ಒಟ್ಟಿನಲ್ಲಿ, ಮುಂಬರುವ ಲೋಕಸಭಾ ಚುನಾವಣೆಯ ಮೇಲೇ ಕಣ್ಣಿಟ್ಟೇ ಬಜೆಟ್ ಸಿದ್ಧವಾಗಿದೆ ಎಂಬುದರಲ್ಲಿ ಅನುಮಾನ ಇಲ್ಲ.