ನವದೆಹಲಿ, ಆ 18 (DaijiworldNews/DB): ಭಾರತದ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಒಂದು ಹಾಗೂ ಭಾರತದ ಏಳು ಯೂಟ್ಯೂಬ್ ಚಾನೆಲ್ಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಗುರುವಾರ ಆದೇಶ ನೀಡಿದೆ.

ಭಾರತದಿಂದ ಕಾರ್ಯನಿರ್ವಹಿಸುತ್ತಿರುವ ಲೋಕ್ತಂತ್ರ ಟಿವಿ, ಯು ಆಂಡ್ ವಿ ಟಿವಿ, ಎಎಂ ರಝ್ವಿ, ಗೌರವ್ಶಾಲಿ ಪವನ್ ಮಿಥಿಲಾಂಚಲ್, ಸೀ ಟಾಪ್ 5ಟಿಎಚ್, ಸರ್ಕಾರಿ ಅಪ್ಡೇಟ್ ಮತ್ತು ಸಬ್ ಕುಚ್ ದೇಖೋ ಹಾಗೂ ಪಾಕ್ನಿಂದ ಕಾರ್ಯ ನಿರ್ವಹಿಸುತ್ತಿರುವ ನ್ಯೂಸ್ ಕೀ ದುನಿಯಾ ಯೂಟ್ಯೂಬ್ ಚಾನೆಲ್ಗಳ ಮೇಲೆ ನಿರ್ಬಂಧ ಹೇರಲು ಆದೇಶಿಸಲಾಗಿದೆ. ಭಾರತದ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಈ ಯೂಟ್ಯೂಬ್ ಚಾನೆಲ್ಗಳು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದವು.
ಈ ಯೂಟ್ಯೂಬ್ ಚಾನೆಲ್ಗಳು 114 ಕೋಟಿಗೂ ಮಿಕ್ಕಿ ವೀಕ್ಷಣೆಗಳು ಹಾಗೂ 85.73 ಲಕ್ಷ ಚಂದಾದಾರರನ್ನು ಹೊಂದಿವೆ. ಭಾರತ ಸರ್ಕಾರದಿಂದ ಧಾರ್ಮಿಕ ಹಬ್ಬ ಆಚರಣೆ ನಿಷೇಧ, ಯುದ್ದ ಘೋಷಣೆ ಎಂಬಿತ್ಯಾದಿ ಸುಳ್ಳು ವಿಚಾರಗಳನ್ನು ಹರಡಿ ಹಣ ಗಳಿಸುತ್ತಿದ್ದವು. ಕೋಮು ಸೌಹಾರ್ದ ಕೆಡಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ದಕ್ಕೆ ತರುವ ತಂತ್ರವನ್ನು ಈ ಚಾನೆಲ್ಗಳು ಮಾಡುತ್ತಿದ್ದವು ಎಂದು ಸರ್ಕಾರದ ಅಧಿಕೃತ ಹೇಳಿಕೆಗಳು ತಿಳಿಸಿರುವುದಾಗಿ ವರದಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ವಿಚಾರಗಳನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಹರಡುತ್ತಿದ್ದವು.
ಸುಳ್ಳು ಮಾಹಿತಿ ಹರಡುತ್ತಿದ್ದ ಹಿನ್ನೆಲೆಯಲ್ಲಿ 2021-22ರ ಅವಧಿಯಲ್ಲಿ 94 ಯೂಟ್ಯೂಬ್ ಚಾನೆಲ್ಗಳು, 19 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 747 ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ಗಳನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ನಿರ್ಬಂಧಿಸಿತ್ತು.