ಮುಂಬೈ, ಫೆ 05(SM): ಪ್ರಯಾಣಿಕರೋರ್ವರಿಗೆ ನೀಡಿದ ಆಹಾರದಲ್ಲಿ ಸತ್ತ ಜಿರಳೆಯೊಂದು ಪತ್ತೆಯಾಗಿರುವ ಘಟನೆ ಏರ್ ಇಂಡಿಯಾ ಕಂಪೆನಿಗೆ ಸೇರಿದ ವಿಮಾನವೊಂದರಲ್ಲಿ 3 ದಿನಗಳ ಹಿಂದೆ ನಡೆದಿದೆ.
ಫೆಬ್ರವರಿ ೨ರ ಶನಿವಾರದಂದು ಬೋಪಾಲ್ ನಿಂದ ಮುಂಬೈಗೆ ವಿಮಾನ ಪ್ರಯಾಣಿಸುತ್ತಿತ್ತು. ಈ ಸಂದರ್ಭ ವಿಮಾನದಲ್ಲಿ ಮನೋಜ್ ಕಂದೆಕರ್ ಎಂಬವರು ಕೂಡ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿನ ಪ್ರಯಾಣಿಕರಿಗೆ ಊಟವನ್ನು ವಿತರಿಸಿದ್ದು, ಈ ಪೈಕಿ ಮನೋಜ್ ಅವರಿಗೆ ಲಭಿಸಿದ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ಆತಂಕಗೊಂಡ ಮನೋಜ್ ತಕ್ಷಣ ಈ ವಿಚಾರವನ್ನು ತನ್ನ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ನಮ್ಮ ಬೋಪಾಲ್-ಮುಂಬೈ ವಿಮಾನದ ಪ್ರಯಾಣಿಕರೋರ್ವರಿಗೆ ಊಟದ ವಿಚಾರದಲ್ಲಿ ನಿರಾಸೆಯಾಗಿದ್ದು, ಇದಕ್ಕೆ ಏರ್ ಇಂಡಿಯಾ ಕ್ಷಮೆಯಾಚಿಸುತ್ತದೆ. ಸಂಸ್ಥೆ ಎಂದೆಂದಿಗೂ ಪ್ರಯಾಣಿಕರ ಸಂತೃಪ್ತಿಯನ್ನೇ ಬಯಸುತ್ತದೆ ಎಂಬುವುದಾಗಿ ಕ್ಷಮೆಯಾಚಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಇಂತಹ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ವಿತರಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿರುವುದು ಮಾತ್ರ ನಾಚಿಕೆಗೇಡಿನ ವಿಚಾರ.