ಬೆಂಗಳೂರು, ಫೆ 6 (MSP): ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣಕ್ಕೆ ತೊಡಕುನ್ನುಂಟು ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಜನದ್ರೋಹಿ ಎಂದು ಜರೆದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಆಪರೇಷನ್ ಕಮಲ ಮಾಡುವುದಿಲ್ಲ, ಅಧಿವೇಶನಕ್ಕೂ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿವೇಶನ ಆರಂಭದಲ್ಲೇ ಗಲಾಟೆ ಆರಂಭಿಸುವ ಮೂಲಕ ಜನದ್ರೋಹಿಯಾಗಿದ್ದಾರೆ” ಎಂದು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ಶಾಸಕರು ಗದ್ದಲದಿಂದ ರಾಜ್ಯಪಾಲರಿಗೂ, ಸದನಕ್ಕೂ ಅಗೌರವವನ್ನು ತೋರಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯ ಹತಾಶ ಮನಃಸ್ಥಿತಿಯ ಪ್ರತೀಕವಾಗಿದೆ.’ ಎಂದು ಟ್ವೀಟ್ ನಲ್ಲಿ ಹೇಳಿದೆ.
ಇಂದು ಬೆಳಗ್ಗೆ ಪ್ರಾರಂಭವಾದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರು, ಉಭಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯ ಜೋರಾಗುತ್ತಿದ್ದಂತೆ ರಾಜ್ಯಪಾಲರು ಅರ್ಧದಲ್ಲೇ ಭಾಷಣವನ್ನು ಮೊಟಕುಗೊಳಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದೆ.