ನವದೆಹಲಿ, ಫೆ 07(SM): ಸಂಸತ್ ನ ಬಜೆಟ್ ಅಧಿವೇಶನ ಇಂದು ಕೊನೆಗೊಂಡಿದೆ. ಕೊನೇ ದಿನವಾದ ಇಂದು ಸಂಸತ್ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂದಿದ್ದಾರೆ. ಕಾಂಗ್ರೆಸ್ ಹಾಗೂ ಮಹಾಘಟಬಂಧನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಗೂ ತಮ್ಮ ಸರಕಾರದ ಇದುವರೆಗಿನ ಸಾಧನೆಯನ್ನು ಸದನದ ಮುಂದಿಟ್ಟಿದ್ದಾರೆ.
ಸಂಸತಿನಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಕಾಂಗ್ರೆಸ್ ಕಾಲದಲ್ಲಿ ಯಾವ ರೀತಿ ಕೆಲಸ ಆಗಿತ್ತು ಮತ್ತು ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುವುದನ್ನು ಸದನದ ಮುಂದಿಟ್ಟರು. ತಮ್ಮ ಅವಧಿಯಲ್ಲಿ ನಿರ್ಮಿಸಿದ ಶೌಚಾಲಯಗಳ ಲೆಕ್ಕ, ನೀಡಿದ ಗ್ಯಾಸ್ ಸಂಪರ್ಕ, ವಿದ್ಯುತ್ ತಲುಪಿಸಿದ ಹಳ್ಳಿಗಳ ಸಂಖ್ಯೆ ಇತ್ಯಾದಿಗಳನ್ನು ಸದನಕ್ಕೆ ವಿವರಿಸಿದರು.
ವಿರೋಧ ಪಕ್ಷಗಳು ಮೋದಿ ವಿರುದ್ಧ ಆಡಿದ ಆರೋಪಗಳಿಗೆ ಉತ್ತರ ನೀಡಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಇಂದಿರಾ ಗಾಂಧಿ, ನೆಹರೂ ಅವರನ್ನು ಮಧ್ಯೆ ತಂದರು. ಮೋದಿ ಸರ್ಕಾರ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಉತ್ತರಿಸಿದ ಮೋದಿ, ಇಂದಿರಾ ಗಾಂಧಿ ಅವರು ಕೇಂದ್ರ ಸಂಸ್ಥೆಗಳನ್ನು ಆಟಿಕೆಗಳಂತೆ ಬಳಸಿದ್ದರು ಎಂದರು. ಕನಿಷ್ಟ 50 ಸರ್ಕಾರಗಳನ್ನು ಇಂದಿರಾ ಗಾಂಧಿ ಉರುಳಿಸಿದ್ದರು ಎಂದು ಮೋದಿ ವ್ಯಂಗ್ಯವಾಡಿದರು.
ಮಹಾಘಟಬಂಧನ್ ಬಗ್ಗೆ ಮಾತನಾಡಿದ ಮೋದಿ, ಜನತೆಗೆ ಬೆರೆಕೆ ಸರಕಾರ ಬೇಕಿಲ್ಲ. ಸಮ್ಮಿಶ್ರ ಸರಕಾರ ಯಾವಾಗಲೂ ಒಳ್ಳೆಯದಲ್ಲ, ಅದು ಜನರಿಗೆ ಗೊತ್ತಿದೆ, ಈ ಬಾರಿಯಂತೂ ಮಹಾಬೆರಕೆಯಾಗಿಬಿಟ್ಟಿದೆ ಅವರು ಎಂದೂ ಸಂಸತ್ಗೆ ಬರುವುದಿಲ್ಲ ಎಂದರು. ಕೊಲ್ಕತ್ತದಲ್ಲಿ ಒಂದಾಗುವ ಅವರು ಕೇರಳಕ್ಕೆ ಹೋದರೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲಾರರು, ಎಂದು ಮಹಾಘಟಬಂಧನ್ ನಡುವೆ ಇರುವ ಪ್ರಾದೇಶಕ ರಾಜಕೀಯ ದ್ವೇಷದ ಬಗ್ಗೆ ಟೀಕೆ ಮಾಡಿದರು.