ಚೆನ್ನೈ, ಫೆ 08(SM): ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಜೆಟ್ ಮಂಡಿಸಿದ್ದಾರೆ. ಇವರಂತೆಯೇ ತಮಿಳುನಾಡು ರಾಜ್ಯ ಸಹ 2019-20ನೇ ಸಾಲಿನ ಬಜೆಟ್ ಮಂಡಿಸಿದೆ. ಆದರೆ ತಮಿಳುನಾಡು ಸರಕಾರ ಮಂಡಿಸಿರುವುದು ಜನರಿಗೆ ಫೇವರೆಟ್ ಆಗಿರುವ ಬಜೆಟ್. ಜನಪ್ರಿಯ ಬಜೆಟ್ ಮಂಡಿಸಿರುವ ತಮಿಳುನಾಡು ಎಐಎಡಿಎಂಕೆ ಸರ್ಕಾರ, ಯಾವುದೇ ಹೊಸ ತೆರಿಗೆ ಹಾಕಿಲ್ಲ. ಬೆಲೆ ಏರಿಕೆ ಮಾಡದೆ ಬಜೆಟ್ ಮಂಡಿಸಿದೆ.
ತಮಿಳುನಾಡಿನ ಬಜೆಟ್ನ ಒಟ್ಟು ಗಾತ್ರ 2,08,671 ಕೋಟಿ ರೂಪಾಯಿ ಆಗಿದೆ. ರಾಜ್ಯದ ಈ ಹಣಕಾಸು ವರ್ಷದ ನಿರೀಕ್ಷಿತ ಆದಾಯ 1,42,267 ಕೋಟಿ ರೂಪಾಯಿ ಆಗಿದೆ.
ಬಜೆಟ್ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ತಮಿಳುನಾಡಿನ ಹಣಕಾಸು ಮಂತ್ರಿ ಓ ಪನ್ನೀರ್ ಸೆಲ್ವಂ ಅವರು ನೀಡಿದ್ದಾರೆ. ದಿವಂಗತ ಜಯಲಲಿತಾ ಅವರ ಭಾವ ಚಿತ್ರ ಮುದ್ರಿತವಾಗಿದ್ದ ಸೂಟ್ಕೇಸ್ ಅನ್ನು ಸದನಕ್ಕೆ ತಂದಿದ್ದ ಅವರು, ಜಯಲಲಿತಾ ಅವರ ಮಾದರಿಯಲ್ಲಿಯೇ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದಾರೆ.
ನಿವೃತ್ತ ನೌಕರರಿಗೆ ವಿಶೇಷ ಪಿಂಚಣಿಗಾಗಿ 29,000 ಕೋಟಿ ಮೀಸಲು. ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳ ಮಾಡಿದ್ದು ಇದಕ್ಕಾಗಿ 55,399 ಕೋಟಿ ಮೀಸಲು. ಉಚಿತ ಸೀರೆ ಮತ್ತು ಪಂಚೆ ವಿತರಣೆಗೆ 491 ಕೋಟಿ ಅನುದಾನ. ಆಹಾರ ಸಬ್ಸಿಡಿಗೆ 6000 ಕೋಟಿ, ಪ್ರವಾಸೋದ್ಯಮ ಇಲಾಖೆಗೆ 788 ಕೋಟಿ, ಇಷ್ಟು ಮಾತ್ರವಲ್ಲದೆ ಹಲವು ಜನಪ್ರಿಯ ಯೋಜನೆಗಳನ್ನು ತಮಿಳುನಾಡು ಸರಕಾರ ಘೋಷಿಸಿದ್ದು, ಯಾವುದೇ ಹೊಸ ತೆರಿಗೆ ಹೇರಿಲ್ಲ ಹಾಗೂ ಇದ್ದ ಯಾವೊಂದು ತೆರಿಗೆಯನ್ನೂ ಹೆಚ್ಚಳ ಮಾಡಿಲ್ಲ.