ಬೆಂಗಳೂರು, ಫೆ 09(SM): ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರಕಾರವನ್ನು ಹೇಗಾದರೂ ಮಾಡಿ ಉರುಳಿಸಬೇಕೆಂದು ಬಿಜೆಪಿ ಪ್ಲಾನ್ ಮಾಡಿಕೊಂಡಂತಿದೆ. ಇದಕ್ಕಾಗಿ ಹತ್ತು ಹಲವು ತಂತ್ರಗಳನ್ನು ಕೂಡ ರೂಪಿಸಿದೆ.
ಶುಕ್ರವಾರ ಸದನದಲ್ಲಿ ಬಜೆಟ್ ಮಂಡನೆಗೂ ಮುನ್ನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಂಬವರದು ಎನ್ನಲಾದ ಆಡಿಯೋ ಬಿಡುಗಡೆಗೊಳಿಸದ ಬೆನ್ನಲ್ಲೇ ಇದೀಗ ಬಿಜೆಪಿ ಕೂಡ ಪ್ರತಿತಂತ್ರ ರೂಪಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಪಕ್ಷದವರೊಬ್ಬರಿಗೆ 25 ಕೋಟಿ ರೂಪಾಯಿ ಆಫರ್ ಮಾಡಿರುವ ವಿಡಿಯೋ ನಮ್ಮಲ್ಲಿದ್ದು ಅದನ್ನು ಸೋಮವಾರ ಬಿಎಸ್ ಯಡಿಯೂರಪ್ಪನವರು ಸದನದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಶುಕ್ರವಾರದಂದು ಬಜೆಟ್ ಮಂಡಿಸುವ ಮುನ್ನ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣುಗೌಡ ಕಂದಕೂರ್ ಅವರಿಗೆ ದೂರವಾಣಿ ಕರೆ ಮಾಡಿ, 25 ಕೋಟಿ ರೂ. ಹಣ, ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಪ್ರಮುಖ ಖಾತೆ ನೀಡಲಾಗುವುದು ಎಂದು ಬಿಜೆಪಿ ಮುಖಂಡ ಬಿಎಸ್ ವೈ ಆಮಿಷವೊಡ್ಡಿದ್ದ ಆಡಿಯೋ ಬಿಡುಗಡೆ ಮಾಡಿದ್ದರು.
ಇದರ ಬೆನ್ನಲ್ಲೇ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ಮುಖಂಡ ಲಿಂಬಾವಳಿ, ನಮ್ಮ ಪಕ್ಷದವರೊಬ್ಬರನ್ನು ಎಂಎಲ್ ಸಿ ಮಾಡಲು ಸಿಎಂ ಕುಮಾರಸ್ವಾಮಿ ಅವರು 25 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಇದರ ವಿಡಿಯೋ ದೃಶ್ಯ ನಮ್ಮಲ್ಲಿದೆ. ಆ ವಿಡಿಯೋವನ್ನು ಸೋಮವಾರ ಸದನದಲ್ಲಿಯೇ ಬಿಎಸ್ ಯಡಿಯೂರಪ್ಪ ಬಿಡುಗಡೆಗೊಳಿಸುತ್ತಾರೆ ಎಂದು ಹೇಳಿದರು. ಅಲ್ಲದೆ ವೀಡಿಯೋ ಕುರಿತಂತೆ ಸ್ಪೀಕರ್ ಗೆ ದೂರು ಕೂಡ ನೀಡಲಾಗುವುದು ಎಂದರು. ಇನ್ನು ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ನಕಲಿಯಾಗಿದ್ದು, ಅದು ಬಿಎಸ್ ವೈ ಅವರ ಧ್ವನಿಯಲ್ಲ ಎಂದಿದ್ದಾರೆ.