ಗುಂಟೂರು, ಫೆ 11(MSP): ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ’ಗೋ ಬ್ಯಾಕ್ ಮೋದಿ’ ಪ್ರತಿಭಟನೆ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟಿನ ಹೊಸ ವ್ಯಾಖ್ಯಾನ ನೀಡಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಹಾಗೂ ತಮಿಳುನಾಡಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆ ಕೇಳಿದ ಬಳಿಕ ಟೀಚರ್ ’ ಗೋ ಬ್ಯಾಕ್ ’ ಎನ್ನುತ್ತಿದ್ದರು. ಅವರು ಹೇಳುತ್ತಿದ್ದ ಮಾತಿನ ಅರ್ಥ ನಮ್ಮ ಜಾಗಕ್ಕೆ ಮತ್ತೆ ಹೋಗುವುದು . ಈಗ ಚಂದ್ರಬಾಬು ನಾಯ್ದು ಗೋ ಬ್ಯಾಕ್ ಮೋದಿ ಎಂದು ಹೇಳುತ್ತಿದ್ದಾರೆ. ಇದರರ್ಥ ನಾನು ಮತ್ತೆ ದೆಹಲಿಗೆ ಹೋಗಿ ಪ್ರಧಾನಿ ಹುದ್ದೆ ಅಲಂಕರಿಸುತ್ತೇನೆ ಎಂದು ತಿರುಗೇಟು ನೀಡಿದರು.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಟ್ವಿಟರ್ ನಲ್ಲಿ #GoBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಕರ್ನಾಟಕದಿಂದ ಟೀಂ ಮೋದಿ ಸಂಘಟನೆ ಫೆ.11 ರಂದು ಬೆಳಿಗ್ಗೆ 8 ಗಂಟೆಗೆ #ComeBackModi ಎಂಬ ಟ್ವಿಟರ್ ಅಭಿಯಾನಕ್ಕೆ ಚಾಲನೆ ನೀಡಿದೆ.