ಬೆಂಗಳೂರು, ಫೆ 11(SM): ಬಜೆಟ್ ಮಂಡನೆಗೂ ಮುನ್ನ ಸಿಎಂ ಕುಮಾರಸ್ವಾಮಿಯವರು ಯಡಿಯೂರಪ್ಪ ಅವರ ಧ್ವನಿಯೆಂದು ಆರೋಪಿಸಿ ಬಿಡುಗಡೆಗೊಳಿಸಿದ್ದ ಆಡಿಯೋ ತನ್ನದೆಂದು ಒಪ್ಪಿಕೊಂಡ ಬಳಿಕ ಇದೀಗ ಆ ಕುರಿತ ತನಿಖೆ ಸಿದ್ದ ಎಂದು ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
'ನಾವೇನು ತನಿಖೆಯಿಂದ ಓಡಿ ಹೋಗುತ್ತಿಲ್ಲ. ತರಾತುರಿಯಲ್ಲಿ ತನಿಖೆ ಮಾಡುವ ಅವಶ್ಯಕತೆಯಿಲ್ಲ. ತನಿಖೆಗೆ ನಾವು ಸಿದ್ಧರಿದ್ದೇವೆ. ನ್ಯಾಯಾಂಗ ಅಥವಾ ಸದನ ಸಮಿತಿ ರಚಿಸಿ ತನಿಖೆ ಮಾಡಿ ಎಂದಿದ್ದೇವೆ' ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ಶಾಸಕರ ಜೊತೆ ಬಿಎಸ್ ವೈ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 'ಆಪರೇಷನ್ ಕಮಲದ ಆಡಿಯೋ ಕುರಿತು ಅವಸರ ಪಟ್ಟು ತನಿಖೆ ನಡೆಸುವುದು ಬೇಡ' ಎಂದರು. ಇನ್ನು ಎಸ್ಐಟಿ ತನಿಖೆ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಹಾಗೂ ಎಸ್ ಐಟಿ ತನಿಖೆ ಬೇಡ ಎಂಬುದು ನಮ್ಮ ಮತ್ತು ಶಾಸಕರ ಅಭಿಪ್ರಾಯವಾಗಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಈ ವಿಚಾರದ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.