ಬೆಂಗಳೂರು, ಫೆ 11(SM): ರಾಜ್ಯ ರಾಜಕೀಯದಲ್ಲಿ ಸದ್ಯ ದಿನಕ್ಕೊಂದು ನಾಟಕೀಯ ಪ್ರಸಂಗಗಳು ನಡೆಯುತ್ತಿವೆ. ರಾಜ್ಯದ ಜನತೆಗೆ ರಾಜಕೀಯವೇ ಕುತೂಹಲವನ್ನು ತಂದೊಡ್ಡಿದೆ. ರಾಜ್ಯದ ಮೈತ್ರಿ ಸರಕಾರದ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಮನಸೋ ಇಚ್ಛೇ ವಾಗ್ದಾಳಿ ನಡೆಸಿದ್ರೆ, ಅತ್ತ ಆಡಳಿತ ಪಕ್ಷ ಕೂಡ ಅದರಿಂದ ಹೊರತಾಗಿಲ್ಲ. ಇದೀಗ ಈಶ್ವರಪ್ಪ ಕೂಡ ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಪಕ್ಷಾಂತರದ ಆಪರೇಷನ್ ಶುರುವಾಗಿದ್ದೇ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ. ಹೀಗಾಗಿ, ಸಿದ್ದರಾಮಯ್ಯ ಆಪರೇಷನ್ನ ಮೊದಲ ಜನಕ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ಶಾಸಕರ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ನಲ್ಲಿ ಎಲ್ಲಾ ಲಾಭ ಪಡೆದು ಕಾಂಗ್ರೆಸ್ಗೆ ಹೋದರು. ರಾಜ್ಯ ರಾಜಕೀಯದಲ್ಲಿ ಆಪರೇಷನ್ಗೆ ಅಡಿಪಾಯ ಹಾಕಿದವರೇ ಸಿದ್ದರಾಮಯ್ಯ. ಆದರೀಗ ಸತ್ಯ ಹರಿಶ್ಚಂದ್ರರಂತೆ ಮಾತಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂಬುವುದಾಗಿ ಖಾರವಾಗಿ ನುಡಿದಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಕಿವಿಗೆ ಹೂವು ಇಟ್ಟು ಕಾಂಗ್ರೆಸ್ ಸೇರಿದಾಗ ಕಾಂಗ್ರೆಸ್ನವರಿಂದ ಸಿದ್ದರಾಮಯ್ಯ ಎಷ್ಟು ಹಣ ಪಡೆದಿದ್ದರು? ಅವರಿಗೆ ಹಣವನ್ನು ಖರ್ಚು ಮಾಡಿದವರು ಯಾರು ಎಂಬುದಕ್ಕೆ ಅವರು ಮೊದಲು ಉತ್ತರಿಸಲಿ. ಇನ್ನೊಬ್ಬರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮೊದಲು ತಾನು ಬಂದ ದಾರಿಯನ್ನು ನೋಡಿ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.