ಕಲಬುರ್ಗಿ, ಫೆ 12 (MSP): ಇನ್ನೆರಡು ದಿನದಲ್ಲಿ ಅಥವಾ ಇಂದು ಸಂಜೆಯೇ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ರಾಜೀನಾಮೆ ನೀಡಬಹುದು. ಸಧ್ಯ ಅವರು ಕಾನೂನು ತಜ್ಞರ ಸಲಹೆ ಪಡೆದು ಅವರು ತಮ್ಮ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಉಮೇಶ ಸಹೋದರ ರಾಮಚಂದ್ರ ಜಾಧವ ಹೇಳಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾನೂನು ತಜ್ಞರ ಸಲಹೆ ಮುಂದಿನ ಎರದು ದಿನದಲ್ಲಿ ರಾಜೀನಾಮೆ ಸಲ್ಲಿಸಬಹುದು. ಸಹೋದರ ಉಮೇಶ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗಿ ಬರುವ ಮನಸ್ಸು ಮಾಡುವುದಿಲ್ಲ ಎಂದು ನನಗನಿಸುತ್ತದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅವರು, ಕಲಬುರ್ಗಿ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು. ಅವರು ಒಂದು ವೇಳೆ ಸ್ಪರ್ಧಿಸಿದರೆ ಗೆಲುವು ಖಂಡಿತಾ’ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಅವರು ಬೆಂಗಳೂರಿನಲ್ಲಿಯೇ ಇದ್ದಾರೆ. ಸರ್ಕಾರ ಉರುಳುವುದಕ್ಕೂ ಉಮೇಶ ಅವರ ರಾಜೀನಾಮೆಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಚಿಂಚೋಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿದೆ. ಹೀಗಾಗಿ ಅವರು ನೊಂದುಕೊಂಡಿದ್ದಾರೆ. ಅವರು ಬೇರೆ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಹೊರಬರುತ್ತಿದ್ದು ಇನ್ನೆರಡು ದಿನಗಳಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.