ಬೆಂಗಳೂರು, ಫೆ 12(SM): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ದಿನವೊಂದರಂತೆ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ. ಆಡಳಿತ ಪಕ್ಷ-ಪ್ರತಿಪಕ್ಷಗಳು ಹಾವು ಮುಂಗುಸಿಯಂತೆ ಕಚ್ಚಾಡುತ್ತಿವೆ. ರಾಜ್ಯದ ರಾಜಕೀಯದಲ್ಲಿ ಅಭದ್ರತೆ ಸೃಷ್ಟಿಸಿ ಇದರ ಲಾಭ ಪಡೆಯುವ ಯತ್ನ ನಡೆಸಿದವರ ವಿರುದ್ಧ ಶಾಶ್ವತ ಪರಿಹಾರ ಕಂಡು ಹಿಡಿಯುವ ಸಲುವಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮತ್ತೆ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಸಿದ್ದತೆ ನಡೆಸುತ್ತಿದ್ದವು. ಇದರ ಆಡಿಯೋವೊಂದು ಬಹಿರಂಗಗೊಂಡ ಹಿನ್ನೆಲೆ ಸದನದ ಅಭಿಪ್ರಾಯ ಹಾಗೂ ಸ್ಪೀಕರ್ ಅವರ ಸೂಚನೆ ಮೇರೆಗೆ ಎಸ್ ಐಟಿ ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿ 8ರಂದು ದೊರೆತ ಆಡಿಯೋ ಬಗ್ಗೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿ ಇದರ ಬಗ್ಗೆ ಸೂಕ್ತ ಚರ್ಚೆ ಆಗಬೇಕು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಕಳೆದ 7 ತಿಂಗಳಿಂದ ಮೈತ್ರಿ ಸರ್ಕಾರದ ಪತನಕ್ಕೆ ಪ್ರತಿಪಕ್ಷಗಳು ಷಡ್ಯಂತ್ರ ನಡೆಸುತ್ತಿವೆ. ಇವರ ಷಡ್ಯಂತ್ರಕ್ಕೆ ಇತಿಶ್ರೀ ಹಾಡುವುದರ ಜತೆಗೆ ಇಂತಹ ಘಟನೆಗಳು ಇನ್ನೆಂದೂ ಮರುಕಳಿಸದಂತೆ ಕ್ರಮ ಜರುಗಿಸುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದಿಂದಲೇ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಪಕ್ಷದ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.