ದೆಹಲಿ, ಫೆ 14(SM): ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಪಾಪ ಕೃತ್ಯಕ್ಕೆ 42 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸಿಆರ್ಪಿಎಫ್ ಯೋಧರು ಚಲಿಸುತ್ತಿದ್ದ 70 ವಾಹನಗಳ ಮೇಲೆ ರಕ್ಕಸ ಉಗ್ರರು ಗುಂಡಿನ ಮಳೆಗೈದಿದ್ದಾರೆ.
ಶ್ರೀನಗರದ ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಸುಧಾರಿತ ಸ್ಪೋಟಕ ಬಳಸಿ ದಾಳಿ ಮಾಡಲಾಗಿದೆ. ಉಗ್ರರ ದಾಳಿಗೆ ಹಲವು ವಾಹನಗಳು ಧ್ವಂಸಗೊಂಡಿದ್ದು, ಯೋಧರ ಒಂದು ವಾಹನ ಸಂಪೂರ್ಣ ಸುಟ್ಟುಕರಕಲಾಗಿದೆ.
ಜೈಷ್-ಎ-ಮೊಹಮ್ಮದ್ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜೈಷ್ ಉಗ್ರ ಅದಿಲ್ ಅಹಮ್ಮದ್ ಖಾನ್ ತನ್ನ ಕಾರಿನಲ್ಲಿ ಸ್ಪೋಟಕಗಳನ್ನು ತುಂಬಿಕೊಂಡು ಬಂದು ಯೋಧರು ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಹಾಗೂ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಬಳಿಕ ಉಗ್ರರು ಗುಂಡಿನ ಮಳೆಗೈದಿದ್ದಾರೆ. 54 ಬೆಟಾಲಿಯನ್ 34 ಸೇನಾ ಯೋಧರಿದ್ದ ಸೇನಾ ವಾಹನದ ಮೇಲೆ ಗ್ರೆನೆಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು 45 ಯೋಧರು ಗಾಯಗೊಂಡಿದ್ದಾರೆ. ಯೋಧರು ಉಗ್ರರ ವಿರುದ್ಧ ಸಾವು ಬದುಕಿನ ಹೋರಾಟ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲಾಗಿದ್ದು, ಇಡೀ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದ ಬಡಗಾಂವ್ನಲ್ಲಿ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.
ಪುರಿ ಸೆಕ್ಟರ್ ನಲ್ಲಿ ನಡೆಸಿದ ದಾಳಿಯ ಬಳಿಕ ಅತ್ಯಂತ ಭೀಕರ ದಾಳಿ ಇದಾಗಿದೆ.